2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸಲಿವೆ: ಅಖಿಲೇಶ್ ಯಾದವ್
ಕೋಲ್ಕತಾ, ಮಾ.19: ಮುಂಬರುವ ದಿನಗಳಲ್ಲಿ ಪ್ರತಿಪಕ್ಷ ಮೈತ್ರಿಕೂಟವೊಂದು ರೂಪುಗೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು,2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರವನ್ನು ವಹಿಸಲಿವೆ ಎಂದು ಹೇಳಿದ್ದಾರೆ.
ಆದರೆ ಪ್ರಸ್ತಾವಿತ ಪ್ರತಿಪಕ್ಷ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಾತ್ರದ ಕುರಿತಂತೆ ಅವರು,ಅದನ್ನು ಆ ಪಕ್ಷವೇ ನಿರ್ಧರಿಸಬೇಕಿದೆ ಎಂದರು.
ಪ್ರತಿಪಕ್ಷ ಮೈತ್ರಿಕೂಟ ಅಥವಾ ರಂಗವನ್ನು ರಚಿಸಲು ಪ್ರಯತ್ನಗಳು ನಡೆಯುತ್ತಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ, ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ತಮ್ಮದೇ ಆದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಅಖಿಲೇಶ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನವಾಗಿ ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ ಅವರು,ಹಲವಾರು ರಾಜ್ಯಗಳಲ್ಲಿ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಅಸ್ತಿತ್ವದಲ್ಲಿಯೇ ಇಲ್ಲ,ಅಲ್ಲೆಲ್ಲ ಪ್ರಾದೇಶಿಕ ಪಕ್ಷಗಳು ಕೇಸರಿ ಪಾಳಯದ ವಿರುದ್ಧ ಶತಾಯಗತಯ ಹೋರಾಟ ನಡೆಸುತ್ತಿವೆ. ಅವು ಯಶಸ್ವಿಯಾಗುತ್ತವೆ ಎಂದು ತಾನು ಆಶಿಸಿದ್ದೇನೆ ಎಂದು ಉತ್ತರಿಸಿದರು.
ಜೆಡಿಯು,ಆರ್ಜೆಡಿ ಮತ್ತು ಡಿಎಂಕೆಯಂತಹ ಪ್ರಾದೇಶಿಕ ಪಕ್ಷಗಳು ಪ್ರತಿಪಕ್ಷ ಮೈತ್ರಿಕೂಟದಲ್ಲಿ ಕಾಂಗ್ರೆಸ್ನ್ನು ಹೊಂದಿರಲು ಉತ್ಸುಕವಾಗಿರುವ ಬಗ್ಗೆ ಗಮನ ಸೆಳೆದಾಗ ಅಖಿಲೇಶ್, ಅವು ಈಗಾಗಲೇ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಹೊಂದಿವೆ. ಇದು ಬೃಹತ್ ಹೋರಾಟದ ಪ್ರಶ್ನೆಯಾಗಿದೆ ಮತ್ತು ಈ ಹೋರಾಟದಲ್ಲಿ ತನ್ನ ಪಾತ್ರವನ್ನು ಕಾಂಗ್ರೆಸ್ ಸ್ವತಃ ನಿರ್ಧರಿಸಲಿದೆ ಎಂದರು.
ಲೋಕಸಭಾ ಚುನಾವಣೆಗಳ ಬಳಿಕ ಯಾರು ಪ್ರತಿಪಕ್ಷ ಪಾಳಯದ ನಾಯಕರಾಗಲಿದ್ದಾರೆ ಎಂಬ ಪ್ರಶ್ನೆಗೆ ಅವರು,ಅದನ್ನು ಚುನಾವಣೆಗಳ ಬಳಿಕ ನಿರ್ಧರಿಸಲಾಗುವುದು ಮತ್ತು ಅದು ಈಗ ಸಂಬಂಧಿಸಿದ ಪ್ರಶ್ನೆಯಲ್ಲ ಎಂದು ಉತ್ತರಿಸಿದರು.
‘2024ರಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಬಯಸಿದ್ದರೆ ಅದು ಉತ್ತರ ಪ್ರದೇಶವನ್ನು ಗೆಲ್ಲಬೇಕು. ಉ.ಪ್ರ.ಮತ್ತು ದೇಶದಲ್ಲಿ ಬಿಜೆಪಿ ಸೋಲುವುದನ್ನು ನಾವು ಖಚಿತಪಡಿಸುತ್ತೇವೆ. ಉ.ಪ್ರ.ದಲ್ಲಿ ನಾವು ನಮ್ಮ ಹಾಲಿ ಮಿತ್ರಪಕ್ಷಗಳೊಂದಿಗೆ ಸೇರಿಕೊಂಡು ಹೋರಾಡುತ್ತೇವೆ’ ಎಂದು ಅಖಿಲೇಶ ಹೇಳಿದರು.
2017ರ ಉ.ಪ್ರ.ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಪರಸ್ಪರ ಕೈಜೋಡಿಸಿದ್ದವು,ಆದರೆ ಬಿಜೆಪಿ ಎದುರು ಸೋಲನ್ನಪ್ಪಿದ್ದವು. ಎರಡು ವರ್ಷಗಳ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಕಾಂಗ್ರೆಸ್ನ್ನು ಹೊರಗಿಡಲಾಗಿತ್ತು.
ಅದಾನಿ ವಿವಾದ ಕುರಿತು ಮಾತನಾಡಿದ ಅವರು,ದೇಶದ ಆಸ್ತಿಗಳನ್ನು ಮತ್ತು ಸಾರ್ವಜನಿಕ ಹಣವನ್ನು ಲೂಟಿ ಹೊಡೆಯಲು ಅವಕಾಶ ನೀಡಿರುವುದಕ್ಕಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಅದಾನಿ ಕುರಿತು ಏಕೆ ಪ್ರಶ್ನೆಗಳನ್ನೆತ್ತಲಾಗುತ್ತಿಲ್ಲ? ಎಲ್ಐಸಿ ಮತ್ತು ಎಸ್ಬಿಐ ಕಳೆದುಕೊಳ್ಳುತ್ತಿರುವ ಸಾರ್ವಜನಿಕ ಹಣದ ಬಗ್ಗೆ ಏಕೆ ಉತ್ತರದಾಯಿತ್ವವಿಲ್ಲ ಎಂದು ಪ್ರಶ್ನಿಸಿದರು.