"ಭಾರತದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ"
ಸ್ವರ್ಣಮಂದಿರಕ್ಕೆ ಭೇಟಿ ನೀಡಿದ್ದ ಜಿ20 ಪ್ರತಿನಿಧಿಗಳ ಮುಂದೆ ಎಸ್‌ಜಿಪಿಸಿ ವರಿಷ್ಠನ ‘ದೂರು’
ಹೊಸದಿಲ್ಲಿ, ಮಾ.19: ಜಿ20 ಶಿಕ್ಷಣ ಕ್ರಿಯಾ ಸಮಿತಿಯ ಸಭೆಗಳಲ್ಲಿ ಭಾಗವಹಿಸಲು ಪಂಜಾಬ್ಗೆ ಆಗಮಿಸಿದ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಮುಂದೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ವರಿಷ್ಠ ಹರ್ಜಿಂದರ್ ಸಿಂಗ್ ಧಾಮಿ ಅವರು ಭಾರತದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ಆಪಾದಿಸಿರುವುದಾಗಿ ‘ ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಜಿ20 ರಾಷ್ಟ್ರಗಳ 55ಕ್ಕೂ ಅಧಿಕ ಪ್ರತಿನಿಧಿಗಳು, ಅತಿಥಿ ರಾಷ್ಟ್ರಗಳು ಹಾಗೂ ಯುನಿಸೆಫ್ನಂತಹ ಆಹ್ವಾನಿತ ಸಂಘಟನೆಗಳು ಮೂರು ದಿನಗಳ ಸಭೆಗಳಲ್ಲಿ ಪಾಲ್ಗೊಂಡಿದ್ದವು.ಶಿಕ್ಷಣ ಕ್ರಿಯಾ ಸಮಿತಿಯ ಸಭೆಗಳ ಸಂದರ್ಭ ಹಮ್ಮಿಕೊಳ್ಳಲಾಗಿದ್ದ ಪ್ರವಾಸ ಕಾರ್ಯಕ್ರಮದ ಭಾಗವಾಗಿ ಈ ಪ್ರತಿನಿಧಿಗಳನ್ನು ಶುಕ್ರವಾರ ಅಮೃತಸರದ ಸುವರ್ಣ ದೇಗುಲಕ್ಕೆ ಕರೆದೊಯ್ಯಲಾಗಿತ್ತು.
ಈ ಸಂದರ್ಭ ಸುವರ್ಣ ದೇಗುಲದಲ್ಲಿ ಪ್ರತಿನಿಧಿಗಳ ಗೌರವಾರ್ಥ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಧಾಮಿ ಅವರು ‘‘ ಜಗತ್ತಿನಾದ್ಯಂತ ಮಾನವಹಕ್ಕುಗಳು ದೊಡ್ಡ ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿರುವ ಬಗ್ಗೆ ವಿನಮ್ರಪೂರ್ವಕವಾಗಿ ನಿಮ್ಮೆಲ್ಲರ ಗಮನಕ್ಕೆ ತರಲು ನಾನು ಬಯಸುತ್ತಿದ್ದೇನೆ ’’ ಎಂದು ಹೇಳಿದರು. ಆಗ ಕೂಡಲೇ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ( ಉನ್ನತ ಶಿಕ್ಷಣ) ನೀತಾ ಪ್ರಸಾದ್ ಹಾಗೂ ಜಿ-20 ಶಿಕ್ಷಣ ಕ್ರಿಯಾ ಸಮಿತಿಯ ವರಿಷ್ಠ ಚೈತನ್ಯಕುಮಾರ್ ಪ್ರಸಾದ್ ಅವರು ಈ ಪ್ರತಿನಿಧಿಗಳು ಧಾರ್ಮಿಕ ಉದ್ದೇಶದಿಂದ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಇತರ ವಿಷಯಗಳನ್ನು ಪ್ರಸ್ತಾವಿಸುವುದಕ್ಕೆ ಅವಕಾಶವಿಲ್ಲವೆಂದು ಧಾಮಿ ಅವರಿಗೆ ತಿಳಿಸುವಂತೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಿಗೆ ತಿಳಿಸಿದರು.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಈ ವಿಷಯವನ್ನು ತಿಳಿಸುವ ಮೊದಲೇ, ಧಾಮಿ ಅವರು ಇಂಗ್ಲಿಷ್ನಲ್ಲಿ ಮಾತನಾಡುತ್ತಾ, ಕೆಲವೊಮ್ಮೆ ಪಂಜಾಬ್ ಹಾಗೂ ಭಾರತದಲ್ಲಿ ಕೂಡಾ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ’’ ಎಂದು ಹೇಳಿದರು. ‘‘ ಹೀಗಾಗಿ ವಿಶೇಷವಾಗಿ ಸಿಖ್ಖರನ್ನು ಒಳಗೊಂಡ ಪ್ರಕರಣಗಳಲ್ಲಿ ಈ ವಾಸ್ತವಾಂಶವನ್ನು ದಯವಿಟ್ಟು ಗಮನಿಸಬೇಕೆಂದು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಅಧ್ಯಕ್ಷರಿಗೆ ಅವರು ಮನವಿ ಮಾಡಿದರು.
ಸ್ಥಳದಲ್ಲಿ ಉಪಸ್ಥಿತರಿದ್ದ ಎಸ್ಜಿಪಿಸಿ ಸಹಾಯಕ ಕಾರ್ಯದರ್ಶಿ ಜಸ್ವಿಂದರ್ ಸಿಂಗ್ ಅವರು, ವಿಶೇಷವಾಗಿ ಸಿಖ್ಖ್ ಸಮುದಾಯದ ಪರವಾಗಿ ಧ್ವನಿಯೆತ್ತುವಂತೆ ಪ್ರತಿನಿಧಿಗಳನ್ನು ಆಗ್ರಹಿಸಿದರು. ಎಸ್ಜಿಪಿಸಿಯು ಜಗತ್ತಿನಾದ್ಯಂತದ ಸಿಖ್ಖರನ್ನು ಪ್ರತಿನಿಧಿಸುತ್ತಿರುವುದರಿಂದ ಅದರ ಅಧ್ಯಕ್ಷರಾಗಿರುವ ಧಾಮಿ ಅವರು ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿರುವ ವಿಷಯವಾಗಿ ನಿಮಗೆ ಮನವಿ ಮಾಡಿದ್ದಾರೆ ಎಂದು ಜಸ್ವಿಂದರ್ ಹೇಳಿದರು.
ಆಗ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಮಧ್ಯಪ್ರವೇಶಿಸಿ, ಇಂತಹ ವಿಷಯಗಳ ಬಗ್ಗೆ ಚರ್ಚಿಸಲು ಇದು ಸೂಕ್ತ ವೇದಿಕೆಯಲ್ಲ ಎಂದರು. ಆನಂತರ ಜಸ್ವಿಂದರ್ ಸಿಂಗ್ ಅವರು ಸುವರ್ಣ ಮಂದಿರದ ನಾಲ್ಕು ದ್ವಾರಗಳ ಮಹತ್ವದ ಬಗ್ಗೆ ಪ್ರತಿನಿಧಿಗಳಿಗೆ ವಿವರಿಸಿದರು.