ದಿಲ್ಲಿ ಪೊಲೀಸರ ನೋಟಿಸ್‌ಗೆ ರಾಹುಲ್ ಪ್ರಾಥಮಿಕ ಉತ್ತರ
ಹೊಸದಿಲ್ಲಿ, ಮಾ.19: ಮಹಿಳೆಯರ ಮೇಲೆ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂದು ತಾನು ಭಾರತ್ ಜೋಡೋ ಯಾತ್ರೆಯ ವೇಳೆ ನೀಡಿದ ಹೇಳಿಕೆಯ ಕುರಿತಾಗಿ ದಿಲ್ಲಿ ಪೊಲೀಸರು ತನಗೆ ನೀಡಿರುವ ನೋಟಿಸ್ಗೆ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ 10 ಅಂಶಗಳನ್ನೊಳಗೊಂಡ ನಾಲ್ಕು ಪುಟಗಳ ಪ್ರಾಥಮಿಕ ಉತ್ತರ ಬರೆದು ಕಳುಹಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಕಳೆದ ಐದು ದಿನಗಳಲ್ಲಿ ಮೂರು ಬಾರಿ ರಾಹುಲ್ ನಿವಾಸಕ್ಕೆ ಬೇಟಿ ನೀಡಿದ್ದಾರೆ. ಶ್ರೀನಗರದಲ್ಲಿತಾನು ಜನವರಿ 30ರಂದು ನೀಡಿದ ಹೇಳಿಕೆಗೆ ವಿಸ್ತೃತವಾದ ಉತ್ತರವನ್ನು ನೀಡಲು ತನಗೆ 8ರಿಂದ 10 ದಿನಗಳ ಕಾಲಾವಕಾಶವನ್ನು ಅವರು ಕೋರಿದ್ದಾರೆಂದು ಮೂಲಗಳು ತಿಳಿಸಿವೆ.
ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಶ್ರೀನಗರದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿರುವ ಬಗ್ಗೆ ಮಹಿಳೆಯರು ತನ್ನೊಂದಿಗೆ ಹೇಳಿಕೊಂಡಿದ್ದಾರೆಂದು ಹೇಳಿದ್ದರು. ಭಾರತ್ ಜೋಡೊ ಯಾತ್ರೆಯು ದಿಲ್ಲಿಯನ್ನು ಕೂಡಾ ಹಾದುಹೋಗಿರುವುದರಿಂದ, ಯಾರಾದರೂ ಸಂತ್ರಸ್ತೆಯು ರಾಹುಲ್ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿದ್ದಾರೆಯೇ ಎಂಬುದನ್ನು ದೃಢಪಡಿಸಲು, ಒಂದು ವೇಳೆ ಹಾಗಿದ್ದಲ್ಲಿಆ ಬಗ್ಗೆ ತನಿಖೆಯನ್ನು ಆರಂಭಿಸಲು ತಾವು ಬಯಸಿರುವುದಾಗಿ ದಿಲ್ಲಿ ಪೊಲೀಸರು ತಿಳಿಸಿದ್ದಾರೆ.