ಮೋದಿಯ ಅತಿದೊಡ್ಡ ಟಿಆರ್‌ಪಿ ರಾಹುಲ್: ಮಮತಾ ವಾಗ್ದಾಳಿ
ಕೊಲ್ಕತ್ತಾ: ರಾಹುಲ್‌ಗಾಂಧಿಯವರು ವಿರೋಧ ಪಕ್ಷದ ಮುಖವಾದಲ್ಲಿ, ಯಾರು ಕೂಡಾ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿ ಮಾಡುವುದು ಸಾಧ್ಯವಾಗದು" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಕ್ಷದ ಆಂತರಿಕ ಸಭೆಯಲ್ಲಿ ರಾಹುಲ್ ವಿರುದ್ಧ ಮಮತಾ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾಗಿ ಪಕ್ಷದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ "ರಾಹುಲ್‌ಗಾಂಧಿಯವರು ಪ್ರಧಾನಿ ಮೋದಿಯ ಅತಿದೊಡ್ಡ ಟಿಆರ್‌ಪಿ" ಎಂದು ಅಪಾದಿಸಿದರು.
"ಸಂಸತ್ ಅಧಿವೇಶನದ ಕಲಾಪ ನಡೆಸಲು ಬಿಜೆಪಿ ಅವಕಾಶ ನೀಡದಿರಲು ಮುಖ್ಯ ಕಾರಣವೆಂದರೆ, ರಾಹುಲ್‌ಗಾಂಧಿ ನಾಯಕರಾಗಬೇಕು.. ರಾಹುಲ್‌ಗಾಂಧಿಯವರನ್ನು ಹೀರೊ ಮಾಡಲು ಬಿಜೆಪಿ ಬಯಸಿದೆ" ಎಂದು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು.
"ಬಿಜೆಪಿ ವಿರುದ್ಧ ಮಂಡಿಯೂರುವುದು ಕಾಂಗ್ರೆಸ್ ಪಕ್ಷ. ಸಿಪಿಎಂ ಹಾಗೂ ಬಿಜೆಪಿ ತೃಣಮೂಲದ ವಿರುದ್ಧ ಅಲ್ಪಸಂಖ್ಯಾತರನ್ನು ಪ್ರಚೋದಿಸುತ್ತಿದೆ" ಎಂದು ಮುರ್ಶಿದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಗೆ ವರ್ಚುವಲ್ ಭಾಷಣ ಮೂಲಕ ಮಾತನಾಡಿದ ಅವರು ಆಪಾದಿಸಿದರು. ಇತ್ತೀಚೆಗೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಟಿಎಂಸಿ ಸೋಲು ಅನುಭವಿಸಿತ್ತು.
ರಾಹುಲ್‌ಗಾಂಧಿಯವರನ್ನು ವಿರೋಧ ಪಕ್ಷಗಳ ಮುಖವಾಗಿಸಿ ಬಿಜೆಪಿ ಲಾಭ ಪಡೆಯುತ್ತಿದೆ ಎಂದು ತೃಣಮೂಲ ಸಂಸದ ಮತ್ತು ಲೋಕಸಭೆಯಲ್ಲಿ ಪಕ್ಷದ ಮುಖಂಡರಾಗಿರುವ ಸುದೀಪ್ ಬಂಡೋಪಾಧ್ಯಾಯ ಇದಕ್ಕೂ ಮುನ್ನ ಆಪಾದಿಸಿದ್ದರು.