ಉರಿಗೌಡ, ನಂಜೇಗೌಡ | ಕಲ್ಪನೆ ಮಾಡಿಕೊಂಡು ಬರೆಯೋದು ಕಾದಂಬರಿ ಆಗುತ್ತದೆ: ನಿರ್ಮಲಾನಂದ ಸ್ವಾಮೀಜಿ
"ಇತಿಹಾಸದ ಹಿನ್ನೆಲೆ ಮನದಟ್ಟು ಮಾಡಿದ ಮೇಲೆ ಸುಮ್ಮನಾಗಿದ್ದಾರೆ"

ಬೆಂಗಳೂರು: ''ಉರಿಗೌಡ, ನಂಜೇಗೌಡರ ವಿಚಾರವಾಗಿ ಕಲ್ಪನೆ ಮಾಡಿಕೊಂಡು ಬರೆಯುವಂತಹದ್ದು ಕಾದಂಬರಿಯಾಗುತ್ತದೆ. ಇಂತಹ ಕತೆಗಳಿಂದ ಸಮುದಾಯದ ಭಾವನೆಗೆ ಧಕ್ಕೆ ಉಂಟಾಗುತ್ತದೆ'' ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿರೋಧದ ನಡುವೆಯೂ ಉರಿಗೌಡ-ನಂಜೇಗೌಡ ಸಿನೆಮಾ ನಿರ್ಮಾಣಕ್ಕೆ ಮುಂದಾಗಿದ್ದ ನಿರ್ಮಾಪಕ, ಸಚಿವ ಮುನಿರತ್ನ ಅವರು ನಿರ್ಮಲಾನಂದ ಸ್ವಾಮೀಜಿ ಅವರ ಸೂಚನೆಯಂತೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಿರ್ಮಲಾನಂದ ಸ್ವಾಮೀಜಿ, ''ಉರಿಗೌಡ-ನಂಜೇಗೌಡ ಬಗ್ಗೆ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿರುವವರಿಗೆ ತಿಳಿಹೇಳಲಾಗಿದೆ. ಅದು ಸಿ.ಟಿ.ರವಿ ಇರಬಹುದು, ಅಶ್ವತ್ಥನಾರಾಯಣ ಇರಬಹುದು, ಗೋಪಾಲಯ್ಯ ಇರಬಹುದು. ಅಥವಾ ಈ ವಿಚಾರವಾಗಿ ಮಾತನಾಡುವವರೆರೆಲ್ಲರೂ ಸರಿಯಾದ ಇತಿಹಾಸದ ಹಿನ್ನೆಲೆ ಮನದಟ್ಟು ಮಾಡಿ ಕೊಟ್ಟ ಮೇಲೆ ಸುಮ್ಮನಾಗಿದ್ದಾರೆ'' ಎಂದು ತಿಳಿಸಿದ್ದಾರೆ.
''ಕಲ್ಪನೆ ಮಾಡಿಕೊಂಡು ಬರೆಯುವಂತಹದ್ದು ಕಾದಂಬರಿಯಾಗುತ್ತದೆ. ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಬರೆದಿರುವಂತಹದ್ದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂಥಹದ್ದು ಯಾವುದು ಕೂಡ ಇಲ್ಲಿಯವರೆಗೂ ಕಂಡುಬಂದಿಲ್ಲ. ಹೀಗಾಗಿ ಇಂತಹ ಹೇಳಿಕೆಗಳ ಮೂಲಕ ಯುವಕರಲ್ಲಿ, ಸಮಕಾಲೀನ ಜಗತ್ತಿನಲ್ಲಿ ಗೊಂದಲ ಸೃಷ್ಟಿ ಮಾಡಿ ಶಕ್ತಿಯನ್ನು ಹಾಳು ಮಾಡಬಾರದು, ಸಮುದಾಯಕ್ಕೆ ಧಕ್ಕೆಯನ್ನು ಉಂಟುಮಾಡಬಾರದು'' ಎಂದು ಎಚ್ಚರಿಕೆ ನೀಡಿದ್ದಾರೆ.
''ಉರಿಗೌಡ, ನಂಜೇಗೌಡರ ಬಗೆಗೆ ಇತಿಹಾಸವನ್ನು ಸಾರುವಂತಹ, ಶಾಸನಗಳು ಸಿಕ್ಕಿದ್ದೇಯಾದರೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಒದಗಿಸಬಹುದು. ಅವುಗಳನ್ನು ನಂತರದಲ್ಲಿ ಕ್ರೂಢೀಕರಿಸಿ ಸಂಶೋಧನೆ ಮಾಡಲಾಗುವುದು. ಶಾಸನ ತಜ್ಞರು, ತಂತ್ರಜ್ಞಾನವೂ ಇದೆ. ಶ್ರೇಷ್ಠ ಸಂಶೋಧಕರೂ ಇದ್ದಾರೆ. ತಂದುಕೊಟ್ಟ ಮಾಹಿತಿಯನ್ನು ಇವರೆಲ್ಲರ ಮೂಲಕ ಓರೆಗೆ ಹಚ್ಚಲಾಗುತ್ತದೆ. ಆದರೆ ಈಗ ನಡೆಯುತ್ತಿರುವಂತಹದ್ದು ಗೊಂದಲಕ್ಕೆ ಮತ್ತು ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವ ಕೆಲಸವಾಗಿದೆ'' ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನೆಮಾ ಮಾಡೋದಿರಲಿ, ಆ ಬಗ್ಗೆ ಇನ್ಮುಂದೆ ಮಾತಾಡಲ್ಲ: ಸಚಿವ ಮುನಿರತ್ನ







