ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ರಾಜಕೀಯ ನಿವೃತ್ತಿ: ರಮೇಶ್ ಜಾರಕಿಹೊಳಿ ಎಚ್ಚರಿಕೆ
ಬೆಳಗಾವಿ, ಮಾ. 20: ಜಿಲ್ಲೆಯ ಅಥಣಿ ಕ್ಷೇತ್ರದಿಂದ ಮಹೇಶ್ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದರೆ ನಾನು ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಕುಮಟಳ್ಳಿ ಅವರಿಗೆ ಟಿಕೆಟ್ ಸಿಗದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ’ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಲಕ್ಷ್ಮಣ್ ಸವದಿ ಬುದ್ದಿವಂತ ರಾಜಕಾರಣಿ. ಅವರು ಏಕೆ ಹೀಗೆ ಮಾಡುತ್ತಿದ್ದಾರೆಂಬುದು ನನಗೆ ಗೊತ್ತಿಲ್ಲ. ಅವರಿಗೆ ಕನಿಷ್ಠ ಜ್ಞಾನ ಇರಬೇಕು. ಐದು ವರ್ಷ ವಿಧಾನ ಪರಿಷತ್ ಸದಸ್ಯನಾಗಿದ್ದು ವರಿಷ್ಠರ ಬಳಿ ಇದೀಗ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳುತ್ತಾರೆಂಬುದು ನನಗೆ ಅಚ್ಚರಿಯಾಗಿದೆ’ ಎಂದು ಪ್ರತಿಕ್ರಿಯಿಸಿದರು.
‘ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಮಹೇಶ್ ಕುಮಟಳ್ಳಿ ತ್ಯಾಗ ಮಾಡಿದ್ದರಿಂದಲೇ ಬಿಜೆಪಿ ಸರಕಾರ ರಚನೆಯಾಗಿದೆ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಥಣಿ ಮುಂದಿನ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ’ ಎಂದು ಘೋಷಿಸಿದ ರಮೇಶ್ ಜಾರಕಿಹೊಳಿ, ‘ಯಾರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೂ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ಕುಮಟಳ್ಳಿಗೆ ಟಿಕೆಟ್ ತಪ್ಪುವಂತಹ ಯಾವುದೇ ಸಮಸ್ಯೆಯಿಲ್ಲ, ಬಿಜೆಪಿ ಪಕ್ಷದಲ್ಲಿ ಆ ರೀತಿ ಯಾವುದೇ ಚರ್ಚೆಯೂ ನಡೆದಿಲ್ಲ. ಕೆಲವರು ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಥಣಿಯಿಂದ ಮಹೇಶ್ ಕುಮಟಳ್ಳಿ, ಗೋಕಾಕ್‍ನಿಂದ ರಮೇಶ್ ಜಾರಕಿಹೊಳಿ, ಕಾಗವಾಡನಿಂದ ಶ್ರೀಮಂತ ಪಾಟೀಲ್ ಸ್ವರ್ಧೆ ಮಾಡುತ್ತಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ನುಡಿದರು.
ಇದನ್ನೂ ಓದಿ: ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ: ಬಿಜೆಪಿ MLC ಲಕ್ಷ್ಮಣ ಸವದಿ