‘ಅಂತರ್ ನಗರ’ ನೂತನ ಎಲೆಕ್ಟ್ರಿಕ್ ಬಸ್ ಸೇವೆಗೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ
ಬೆಂಗಳೂರು, ಮಾ. 20: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಅಂತರ್ ನಗರ ‘ಅತ್ಯುನ್ನತ ಅನುಭವ’ದ ಪವರ್ ಪ್ಲಸ್ ವಿದ್ಯುತ್ ಚಾಲಿತ ನೂತನ ಎಲೆಕ್ಟ್ರಿಕ್ ಬಸ್ ಸೇವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿಸಿದರು.
ಸೋಮವಾರ ಕೆಎಸ್ಸಾರ್ಟಿಸಿ ವತಿಯಿಂದ ವಿಧಾನಸೌಧದ ವೈಭವಪೇತ ಮೆಟ್ಟಿಲುಗಳ ಮೇಲೆ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ನೂತನ ಬಸ್ ಸೇವೆಗೆ ಚಾಲನೆ ನೀಡಲಾಯಿತು. ದೇಶದ ಪ್ರಮುಖ ಎಲೆಕ್ಟ್ರಿಕ್ ಬಸ್ ತಯಾರಕರಾದ ಒಲೆಕ್ಟ್ರಾ ಗ್ರೀನ್ ಟೆಕ್ ಲಿ. ಕೆಎಸ್ಸಾರ್ಟಿಸಿಗೆ 25 ಎಲೆಕ್ಟ್ರಿಕ್ ಬಸ್‍ಗಳನ್ನು ಒದಗಿಸಿದ್ದು ಅಂತರ್ ನಗರ ಸಾರ್ವಜನಿಕರ ಪ್ರಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿಯ ಮಾರ್ಗಗಳಲ್ಲಿ ನೂತನ ಎಲೆಕ್ಟ್ರಿಕ್ ಬಸ್ಸುಗಳು ಶೀಘ್ರದಲ್ಲೇ ಸಂಚರಿಸಲಿವೆ. ಒಟ್ಟು ಚಾಲಕ ನಿರ್ವಾಹಕ ಸೇರಿದಂತೆ 45 ಆಸನಗಳನ್ನು ಒಳಗೊಂಡಿರುವ ಈ ಬಸ್ ಅತ್ಯಾಧುನಿಕವಾಗಿದ್ದು, ಪ್ರಯಾಣಿಕರಿಗೆ ‘ಅತ್ಯುನ್ನತ ಅನುಭವ’ವನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಒಟ್ಟು 12 ಮೀಟರ್ ಉದ್ದದ ಸಂಪೂರ್ಣ ಹವಾನಿಯಂತ್ರಿತ ಟೈಪ್-3 ಇಂಟರ್ ಸಿಟಿ ಇ-ಬಸ್‍ಗಳು ಒಂದು ಚಾರ್ಜ್‍ನಲ್ಲಿ 300 ಕಿ.ಮೀ ಸಂಚರಿಸಲಿದೆ. ಇದು ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆಂಷನ್, ಇಬಿಎಸ್ ನೊಂದಿಗೆ ಡಿಸ್ಕ್ ಬ್ರೇಕ್‍ಗಳು, 5 ಕ್ಯೂಮೆಟ್ ಲಗೇಜ್ ಸ್ಪೇಸ್, ವೈವಿಧ್ಯ ವಿನ್ಯಾಸದ ಒಳಾಂಗಣ, ಪುಶ್-ಬ್ಯಾಕ್ ಐರಾಮಿ ಸೀಟುಗಳು, ವೈ-ಫೈ ಸೌಲಭ್ಯ, ಸಿಸಿ ಕ್ಯಾಮರಾ ಕಣ್ಗಾವಲು ಮತ್ತು ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಯುಎಸ್‍ಬಿ ಪೋರ್ಟ್‍ಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಆರಾಮದಾಯಕ ಸವಾರಿಯನ್ನು ಒದಗಿಸುವ ಜತೆಗೆ ವಾಯುಮಾಲಿನ್ಯ ತಡೆ ಗುರಿಗಳನ್ನು ಪೂರೈಸಲು ಸಹಕಾರಿಯಾಗಿದೆ.
ಇದೇ ವೇಳೆ ಮಾತನಾಡಿದ ಒಲೆಕ್ಟ್ರಾ ಗ್ರೀನ್ ಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಪ್ರದೀಪ್, ‘ನೂತನ ಎಲೆಕ್ಟ್ರಿಕ್ ವಾಹನಗಳ ಮೂಲಕ ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ಒದಗಿಸಲು ಒಲೆಕ್ಟ್ರಾ ಗ್ರೀನ್ ಟೆಕ್ ಬದ್ಧವಾಗಿದೆ ಮತ್ತು ಭಾರತದ ಹೆಚ್ಚಿನ ರಾಜ್ಯಗಳು ತಮ್ಮ ಹಸಿರು (ಮಾಲಿನ್ಯ ನಿಯಂತ್ರಣ) ಗುರಿ ಸಾಧಿಸಲು ಎಲೆಕ್ಟ್ರಿಕ್ ಬಸ್‍ಗಳನ್ನು ಹೆಚ್ಚಿಸಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಉಪಾಧ್ಯಕ್ಷ ಮೋಹನ್ ಮೆಣಸಿನಕಾಯಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಸೇರಿದಂತೆ ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.