ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪದವಿ: ಎನ್‍ಆರ್ ಐ ಶುಲ್ಕ ಪಾವತಿಸಿ ಅಮೆರಿಕಕ್ಕೆ ವಾಪಸ್ಸಾಗಲು ಹೈಕೋರ್ಟ್ ಸೂಚನೆ
ಬೆಂಗಳೂರು, ಮಾ.20: ಭಾರತದವರು ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಸರಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಮತ್ತೆ ಅಮೆರಿಕಕ್ಕೆ ವಾಪಸ್ಸಾಗಲು ಮುಂದಾಗಿದ್ದ ವೈದ್ಯರೊಬ್ಬರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅವರು ಅನಿವಾಸಿ ಭಾರತೀಯ(ಎನ್‍ಆರ್ ಐ) ಅಥವಾ ಭಾರತದ ಸಾಗರೋತ್ತರ ನಾಗರಿಕ(ಓಸಿಐ) ಕೋಟಾದಡಿ ಭರಿಸುವ ಶುಲ್ಕ ಪಡೆದು ತಮ್ಮ ದೇಶಕ್ಕೆ ಹಿಂದಿರುಗಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಸುಮಾರು 29 ವರ್ಷದ ವೈದ್ಯಕೀಯ ಪದವಿಧರೆ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಈ ಸೂಚನೆ ನೀಡಿ ಆದೇಶಿಸಿದೆ. ಅರ್ಜಿದಾರರು ಭಾರತೀಯರು ಎಂದು ಸುಳ್ಳು ಹೇಳಿ ಎಲ್ಲ್ಲ ಸೌಲಭ್ಯಗಳನ್ನು ಪಡೆದುಕೊಂಡು ನಿಯಮ ಬಾಹಿರವಾಗಿ ತಮ್ಮ ಗುರಿಯನ್ನು ಸಾಧನೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಬೆಳವಣಿಗೆ ಅತ್ಯಂತ ಖಂಡನೀಯ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣವೇನು?: ಅರ್ಜಿದಾರರು 1997ರ ಫೆ.5ರಂದು ಅಮೆರಿಕದಲ್ಲಿ ಭಾರತೀಯ ದಂಪತಿಗೆ ಜನಿಸಿದ್ದರು. ಪೋಷಕರು ಭಾರತೀಯ ರಾಯಭಾರ ಕಚೇರಿಯಲ್ಲಿ ಅಮೆರಿಕದ ನಾಗರಿಕ ಎಂಬುದಾಗಿ ನೋಂದಣಿ ಮಾಡಿಸಿದ್ದರು. ಬಳಿಕ ಅಮೆರಿಕ ಅವರಿಗೆ ಪಾಸ್‍ಪೋರ್ಟ್‍ನ್ನು ವಿತರಣೆ ಮಾಡಿತ್ತು. ಈ ಪಾಸ್‍ಪೋರ್ಟ್ ಪಡೆದು ಅವರು 2003ರಲ್ಲಿ ಭಾರತಕ್ಕೆ ಬಂದಿದ್ದರು. ಈ ವೀಸಾ ಅವಧಿ 2004ರ ಸೆಪ್ಟಂಬರ್‍ವರೆಗೆ ಮಾತ್ರ ಇತ್ತು.
ಬಳಿಕ, ರಾಜ್ಯದಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಮುಗಿಸಿದ್ದರು. ನಂತರ ಸರಕಾರಿ ಕೋಟಾದಲ್ಲಿ ಮಂಡ್ಯದ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು. ವೈದ್ಯಕೀಯ ಪದವಿ ಪೂರ್ಣಗೊಂಡ ಬಳಿಕ ಹೊಸದಾಗಿ ಪಾಸ್‍ಪೋರ್ಟ್‍ನೀಡುವಂತೆ ಅಮೆರಿಕ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಪರಿಗಣಿಸಿದ್ದ ಅಮೆರಿಕ ಒಂದು ವರ್ಷದ ಅವಧಿಗೆ ಪಾಸ್‍ಪೋರ್ಟ್‍ನ್ನು ನೀಡಿತ್ತು. ಬಳಿಕ, ಭಾರತದಿಂದ ಹೊರಹೋಗಲು ಅನುಮತಿ ನೀಡುವಂತೆ ವಲಸೆ ವಿಭಾಗದ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಲಸೆ ಕಚೇರಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಮ್ಮ ಕಕ್ಷಿದಾರರು ಅಮೆರಿಕದಿಂದ ಭಾರತಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಅಪ್ರಾಪ್ತರಾಗಿದ್ದರು. ಅವರ ತಾಯಿ ಒಬ್ಬಂಟಿಯಾಗಿದ್ದರು. ಹೀಗಾಗಿ, ಅರ್ಜಿದಾರರಿಗೆ ನಾಗರಿಕ ಕಾಯ್ದೆಗಳು ಮತ್ತು ಪಾಸ್ ಪೋರ್ಟ್ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ವಿದ್ಯಾಭ್ಯಾಸ ಮುಗಿಸಿ ತಮ್ಮ ದೇಶಕ್ಕೆ ಹಿಂದಿರುಗುತ್ತಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರಕಾರದ ಪರ ವಕೀಲರು, ಅರ್ಜಿದಾರರು ಭಾರತಕ್ಕೆ ಬರುವುದಕ್ಕೆ ಪಡೆದಿದ್ದ ಪ್ರವಾಸಿ ವೀಸಾ ಅವಧಿ 2004ರಲ್ಲೇ ಮುಕ್ತಾಯವಾಗಿದ್ದರೂ, 2023ರ ವರೆಗೂ ಅರ್ಜಿದಾರರು ಅಕ್ರಮವಾಗಿ ನೆಲೆಸಿದ್ದಾರೆ. ಇದು ವಿದೇಶಿಯರ ಕಾಯ್ದೆಗೆ ವಿರುದ್ಧವಾಗಿದೆ. ಅಲ್ಲದೇ, ಅರ್ಜಿದಾರರು ಭಾರತೀಯರು ಎಂದು ಹೇಳಿಕೊಂಡಿದ್ದು, ಹೀಗಾಗಿ ಅಮೆರಿಕ ದೇಶ ಪಾಸ್ ಪೋರ್ಟ್ ನೀಡಿದೆ. ಸುಳ್ಳು ಮಾಹಿತಿ ನೀಡಿ ಅರ್ಜಿದಾರರು ವೈದ್ಯಕೀಯ ಪದವಿ ಪೂರ್ಣಗೊಳಿಸಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರಿಗೆ ಅಮೆರಿಕಕ್ಕೆ ತೆರಳುವಂತೆ ಸೂಚಿಸಿದೆ.