ಮಹಿಳಾ ಪ್ರೀಮಿಯರ್ ಲೀಗ್: ಯುಪಿ ವಾರಿಯರ್ಸ್ ಪ್ಲೇ ಆಫ್‌ಗೆ ಪ್ರವೇಶ
ಗುಜರಾತ್ ವಿರುದ್ಧ ರೋಚಕ ಜಯ
ಮುಂಬೈ, ಮಾ.20:ಗ್ರೆಸ್ ಹ್ಯಾರಿಸ್(72 ರನ್, 41 ಎಸೆತ) ಹಾಗೂ ತಹ್ಲಿಯಾ ಮೆಕ್‌ಗ್ರಾತ್(57 ರನ್, 38 ಎಸೆತ) ಅರ್ಧಶತಕಗಳ ಕೊಡುಗೆ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡವನ್ನು 3 ವಿಕೆಟ್‌ನಿಂದ ಕೊನೆಯ ಓವರ್‌ನಲ್ಲಿ ರೋಚಕವಾಗಿ ಮಣಿಸಿದ ಯುಪಿ ವಾರಿಯರ್ಸ್ ಮಹಿಳೆಯರ ಪ್ರೀಮಿಯರ್ ಲೀಗ್(WPL)ನಲ್ಲಿ ಪ್ಲೇ-ಆಫ್‌ಗೆ ಪ್ರವೇಶಿಸಿದೆ.
ಗೆಲ್ಲಲು 179 ರನ್ ಗುರಿ ಪಡೆದಿದ್ದ ವಾರಿಯರ್ಸ್ 19.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
ಇದಕ್ಕೂ ಮೊದಲು ಟಾಸ್ ಜಯಿಸಿದ ಗುಜರಾತ್ ನಾಯಕಿ ಸ್ನೇಹ ರಾಣಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಸೋಫಿಯಾ ಡಂಕ್ಲೆ(23) ಹಾಗೂ ಲೌರಾ ವಾಲ್ವಾರ್ಡ್(17 ರನ್)ಮೊದಲ ವಿಕೆಟಿಗೆ 41 ರನ್ ಗಳಿಸಿ ಬಿರುಸಿನ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಬೆನ್ನುಬೆನ್ನಿಗೆ ಔಟಾದಾಗ ಗುಜರಾತ್ ಒತ್ತಡಕ್ಕೆ ಸಿಲುಕಿತು. 4ನೇ ವಿಕೆಟಿಗೆ 93 ರನ್ ಜೊತೆಯಾಟ ನಡೆಸಿದ ದಯಾಳನ್ ಹೇಮಲತಾ(57 ರನ್, 33 ಎಸೆತ) ಹಾಗೂ ಅಶ್ಲೆ ಗಾರ್ಡನರ್(60 ರನ್,39 ಎಸೆತ) ಗುಜರಾತ್ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಲು ನೆರವಾದರು.
ಗೆಲ್ಲಲು 179 ರನ್ ಗುರಿ ಪಡೆದ ಯುಪಿ ಒಂದು ಹಂತದಲ್ಲಿ 39 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಗ್ರೆಸ್ ಹ್ಯಾರಿಸ್ ಹಾಗೂ ಮೆಕ್‌ಗ್ರಾತ್ 4ನೇ ವಿಕೆಟಿಗೆ 78 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಮೆಕ್‌ಗ್ರಾತ್ ಔಟಾದ ನಂತರ ಗ್ರೆಸ್ ಹ್ಯಾರಿಸ್ ಅವರು ಎಕ್ಲೆಸ್ಟೋನ್(ಔಟಾಗದೆ 19 ರನ್) ಜೊತೆ 6ನೇ ವಿಕೆಟ್‌ಗೆ 42 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಯುಪಿ ತಾನಾಡಿದ 7ನೇ ಪಂದ್ಯದಲ್ಲಿ 4ನೇ ಜಯ ದಾಖಲಿಸಿ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಮುಂದಿನ ಸುತ್ತಿಗೆ ಏರಿತು. ಗುಜರಾತ್ ಆಡಿರುವ ಒಟ್ಟು 8 ಪಂದ್ಯಗಳ ಪೈಕಿ 6ನೇ ಸೋಲು ಕಂಡಿದೆ. ಕೇವಲ 2ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.