ಹೆಬ್ರಿ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ

ಹೆಬ್ರಿ, ಮಾ.20: ಕರ್ನಾಟಕ ರಾಜ್ಯ ಪೊಲೀಸ್, ಉಡುಪಿ ಜಿಲ್ಲಾ ಪೊಲೀಸ್ ಘಟಕದ ಆಶ್ರಯದಲ್ಲಿ ಹೆಬ್ರಿ ರಿಂಗ್ ರೋಡಿನ ಬಳಿ 2.38 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಹೆಬ್ರಿ ಪೊಲೀಸ್ ಠಾಣೆಯ ಕಟ್ಟಡವನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹೆಬ್ರಿ ತಾಲೂಕು ರಚನೆಯಾಗಿ ಎಲ್ಲಾ ಮಟ್ಟದ ಇಲಾಖೆಗಳು ಹಂತ ಹಂತವಾಗಿ ಸರಕಾರದಿಂದ ಮಂಜೂರುಗೊಂಡು ಬರ ತೊಡಗಿವೆ. ಇಂದು ಪೊಲೀಸ್ ವ್ಯವಸ್ಥೆ ಸುಧಾರಣೆಗೊಂಡಿದ್ದು, ಹಿಂದೆಗಿಂತ ತಂತ್ರಜ್ಞಾನ ಈಗ ಬೆಳೆದಿದೆ. ಅಪರಾಧಿಗಳ ಪತ್ತೆ ಕಾರ್ಯ ದಕ್ಷ ಪೊಲೀಸರಿಂದ ಚುರುಕಾಗಿ ನಡೆಯುತ್ತಿದೆ. ಇಲಾಖೆಯನ್ನು ಸದೃಢಗೊಳಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಪೊಲೀಸರು ಸಮರ್ಥರಾಗಿದ್ದಾರೆ. ಕಾರ್ಕಳ ಹೆಬ್ರಿ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ, ತಾಲೂಕು ಆಡಳಿತದೊಂದಿಗೆ ಜನರು ಸಹಕಾರ ನೀಡಬೇಕು. ಹೆಬ್ರಿಗೆ ನೂತನ ಪೊಲೀಸ್ ವಸತಿಗೃಹದ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ಸುಸಜ್ಜಿತ ವಸತಿಗೃಹ ನಿರ್ಮಾಣ ಮಾಡುವ ಯೋಚನೆ ಇದೆ ಎಂದು ಅವರು ತಿಳಿಸಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ, ಹೆಬ್ರಿ ತಾಪಂ ಕಾರ್ಯನಿರ್ವಾಹಣಾಧಿ ಕಾರಿ ಶಶಿಧರ್ ಕೆ.ಜಿ. ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ ಅಕ್ಷಯ್ ಎಂ.ಹಾಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ವಂದಿಸಿದರು. ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನೂತನ ಪೊಲೀಸ್ ಠಾಣೆಯು ಸ್ವಾಗತ ಕೋಠಡಿ, ಪೊಲೀಸ್ ಉಪನಿರೀಕ್ಷಕರ ತನಿಖಾ ಕೊಠಡಿ, ನಿಸ್ತಂತು ವಿಭಾಗ, ಗಣಕಯಂತ್ರ ಕೊಠಡಿ, ಡಿ ಲಿಂಕ್ ವ್ಯವಸ್ಥೆ ಕೊಠಡಿ, ಬಂಧಿಖಾನೆ, ಠಾಣಾ ಬರಹಗಾರರ ಕೊಠಡಿ ಮೊದಲಾದ ಮುಖ್ಯ ಕೊಠಡಿಗಳು ಮತ್ತು ವಿಭಾಗಗಳನ್ನು ಹೊಂದಿದಿದೆ.