ಶೇಖರ ಹಾವಂಜೆ ಮೇಲೆ ಸುಳ್ಳು ಕೇಸು; ರಾಜಕೀಯ ಷಡ್ಯಂತ್ರ: ದಸಂಸ ಭೀಮವಾದ ಆರೋಪ
ಉಡುಪಿ, ಮಾ.20: ಜಿಲ್ಲೆಯಲ್ಲಿ ದಲಿತರ, ಶೋಷಿತರ ಧ್ವನಿಯಾಗಿ ಜನಪರ ಹೋರಾಟ ನಡೆಸುತಿದ್ದ ದಲಿತ ಮುಖಂಡ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಶೇಖರ ಹಾವಂಜೆ ಮೇಲೆ ದಲಿತ ಮಹಿಳೆಯ ಮೂಲಕ ಸುಳ್ಳು ಕೇಸು ದಾಖಲಿಸಿರುವುದು ರಾಜಕೀಯ ಷಡ್ಯಂತ್ರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿಯ ರಾಜ್ಯ ಸಂಚಾಲಕ ಆರ್.ಮೋಹನ್ರಾಜ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಅರಣ್ಯಭೂಮಿ, ಸರಕಾರಿ ಭೂಮಿ ಅಕ್ರಮವಾಗಿ ಒತ್ತುವರಿ, ಸರಕಾರಿ, ಅರಣ್ಯ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಹತ್ತುಹಲವು ಅಕ್ರಮ ದಂಧೆಯ ವಿರುದ್ಧ ಜನಪರ ಹೋರಾಟ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಲಾಗಿದೆ ಎಂದವರು ದೂರಿದರು.
ಶೇಖರ ಹಾವಂಜೆ ಅವರ ಹೋರಾಟಗಳಿಂದ ಕಂಗಾಲಾಗಿರುವ ಆಡಳಿತ ಪಕ್ಷದವರು ಹಾಗೂ ಅಕ್ರಮ ದಂಧೆಕೋರರು ಇದೀಗ ಇಬ್ಬರು ನಕಲಿ ಪತ್ರಕರ್ತರನ್ನು ಬಳಸಿಕೊಂಡು ದಲಿತ ಸಮುದಾಯದ ಮಹಿಳೆಯೊಬ್ಬರ ಮೂಲಕ ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದಾರೆ. ದಲಿತ ಮಹಿಳೆಯೇ ಮಾ.14ರಂದು ಶೇಖರ ಮೇಲೆ ಹಲ್ಲೆ ನಡೆಸಿ, ಬಳಿಕ ಅವರೇ ಶೇಖರ್ ಹಾವಂಜೆ ಹಲ್ಲೆ ನಡೆಸಿದ್ದಾರೆಂದು ಸುಳ್ಳು ದೂರು ನೀಡಿದ್ದು, ಅದೇ ಕ್ಷಣದಲ್ಲಿ ಪ್ರಕರಣ ದಾಖಲಾಗಿದೆ ಎಂದವರು ಹೇಳಿದರು.
ಹಲ್ಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶೇಖರ ಹಾವಂಜೆ, ಮರುದಿನ ನೀಡಿದ ದೂರನ್ನು ದಾಖಲಿಸಿಕೊಳ್ಳಲು ಬ್ರಹ್ಮಾವರ ಪೊಲೀಸರು ವಿಳಂಬ ನೀತಿ ಅನುಸರಿಸಿದ್ದಾರೆ. ಸಂಘಟನೆಯ ಒತ್ತಡದ ಬಳಿಕ ಅವರ ದೂರನ್ನು ದಾಖಲಿಸಿಕೊಂಡಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಕರಣದ ಕುರಿತಂತೆ ಪೊಲೀಸರು ಕೂಡಲೇ ತನಿಖೆ ನಡೆಸಬೇಕು ಎಂದವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕರಾದ ರಾಜು ಎಂ.ತಳವಾರ್, ಸಪ್ನ ಮೋಹನ್, ಜಿಲ್ಲಾ ಸಂಚಾಲಕರಾದ ಗೋಪಾಲ್ ಶಿವಪುರ ಹಾಗೂ ಸಂಜೀವ ಕುಕ್ಕೆಹಳ್ಳಿ ಉಪಸ್ಥಿತರಿದ್ದರು.