ಕೆನಡಾ: ಸಿಖ್ ವಿದ್ಯಾರ್ಥಿಯ ಮೇಲೆ ಹಲ್ಲೆ; ಟರ್ಬನ್ ಹರಿದುಹಾಕಿ ಥಳಿತ
ಟೊರಂಟೊ, ಮಾ.20: ಭಾರತದ 21 ವರ್ಷದ ಸಿಖ್ ವಿದ್ಯಾರ್ಥಿಯ ಮೇಲೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಅವರ ಟರ್ಬನ್ ಅನ್ನು ಹರಿದುಹಾಕಿದ್ದಾರೆ. ಅಲ್ಲದೆ ಅವರ ಕೂದಲನ್ನು ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ರಾತ್ರಿ ಸುಮಾರು 10:30ರ ವೇಳೆ ಗನನ್ದೀಪ್ ಸಿಂಗ್ ಅಂಗಡಿಯಿಂದ ತನ್ನ ಮನೆಯತ್ತ ಸಾಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಸುಮಾರು 15 ಮಂದಿ ಯುವಕರ ತಂಡವು ಬಸ್ನಲ್ಲಿ ಗಗನ್ದೀಪ್ ಸಿಂಗ್ರ ಜತೆ ತಗಾದೆ ತೆಗೆದು ಅವರ ತಲೆಯ ಮೇಲೆ ವಿಗ್ ಅನ್ನು ಎಸೆದಿದೆ. ಅದಕ್ಕೆ ಆಕ್ಷೇಪಿಸಿದ ಸಿಂಗ್, ಪೊಲೀಸರನ್ನು ಕರೆಯುವುದಾಗಿ ಎಚ್ಚರಿಸಿದ್ದಾರೆ.
ಬಳಿಕ ಸಿಂಗ್ ಬಸ್ಸ್ಟಾಪ್ನಲ್ಲಿ ಇಳಿದಾಗ ಅವರನ್ನು ಹಿಂಬಾಲಿಸಿದ ತಂಡ ಹಿಗ್ಗಾಮುಗ್ಗಾ ಥಳಿಸಿದೆ. ಅವರ ಮುಖಕ್ಕೆ ಗಂಭೀರ ಗಾಯವಾಗಿದ್ದು ಮಾತನಾಡಲು ಕಷ್ಟವಾಗುತ್ತಿದೆ ಎಂದು ಸ್ಥಳೀಯ ಕೌನ್ಸಿಲರ್ ಮೋಹಿನಿ ಸಿಂಗ್ ಹೇಳಿದ್ದಾರೆ. ಇಂತಹ ಘಟನೆಯನ್ನು ಸಹಿಸಲು ಆಗದು ಎಂದು ಹೇಳಿರುವ ಕೆನಡಾ ಪೊಲೀಸರು, ಈ ಪ್ರಕರಣದ ಬಗ್ಗೆ ತನಿಖೆಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.