ಬಿಜೆಪಿ ಹುಟ್ಟು ಹಾಕಿದ 'ಉರಿ ನಂಜು'ಗೆ ಶ್ರೀಗಳು ಮದ್ದು ಅರೆದಿದ್ದಾರೆ: ಜೆಡಿಎಸ್
ಬೆಂಗಳೂರು: ''ಉರಿಗೌಡ, ನಂಜೇಗೌಡರ ಕತೆಗಳಿಂದ ಸಮುದಾಯದ ಭಾವನೆಗೆ ಧಕ್ಕೆ ಉಂಟಾಗುತ್ತದೆ'' ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಜೆಡಿಎಸ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ.
ಸೋಮವಾರ ಟ್ವೀಟ್ ಮಾಡಿರುವ ಜೆಡಿಎಸ್ @JanataDal_S 'ಐತಿಹಾಸಿಕ ವಿಚಾರಕ್ಕೆ ಕೋಮು ಬಣ್ಣ ಹಚ್ಚಿ ಬಿಜೆಪಿ ಹಿಂದಿನಿಂದಲೂ ರಾಜಕೀಯ ಮಾಡುತ್ತಾ ಬಂದಿದೆ. ಚುನಾವಣೆ ಗೆಲ್ಲಲು ಬಿಜೆಪಿ ಯಾವ ಮಟ್ಟಕ್ಕೆ ಇಳಿಯಲಿದೆ ಎಂಬುದಕ್ಕೆ 'ಉರಿನಂಜು' ಕಥೆ ಸಾಕ್ಷಿ. ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ಬಿಜೆಪಿ ಹುಟ್ಟು ಹಾಕಿದ 'ಉರಿ ನಂಜು'ಗೆ ಶ್ರೀಗಳು ಮದ್ದು ಅರೆದಿದ್ದಾರೆ' ಎಂದು ಹೇಳಿದೆ.
'ಅನಾದಿಕಾಲದಿಂದಲೂ ದೇಶಕ್ಕಾಗಿ ಪ್ರಾಣ ಒತ್ತೆಯಿಟ್ಟು ಹೋರಾಟ ಮಾಡಿದ ಒಕ್ಕಲಿಗ ಸಮುದಾಯವನ್ನು ದೇಶದ್ರೋಹಿಗಳಂತೆ ಬಿಂಬಿಸುವ ಹುನ್ನಾರ ಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯ ಮಧ್ಯಪ್ರವೇಶದಿಂದ ವಿಫಲವಾಗಿದೆ. ಮಿಸ್ಟರ್ ಸಿಟಿ ರವಿ, ಅಶ್ವತ್ಥನಾರಾಯಣ ಅವರೇ ಚುನಾವಣೆಗೆ ಮುಂಚೆಯೆ ಮಂಡ್ಯ-ಮೈಸೂರಿನ ಜನರು ನಿಮ್ಮನ್ನು ಸೋಲಿಸಿದ್ದಾರೆ' ಎಂದು ಕುಟುಕಿದೆ.
'ಮುನಿತ್ನ ಅವರೇ, ನಿಮ್ಮಂತಹ ಸುಳ್ಳುಕೋರರ ಮಾತನ್ನು ಜನರು ನಂಬುವುದಿಲ್ಲ. ಮೈಸೂರು ಪ್ರಾಂತ್ಯದ ಜನರು ಪ್ರಾಚೀನ ಕಾಲದಿಂದಲೂ ಸೌಹಾರ್ದ ಪರಂಪರೆ ಮತ್ತು ಬಹುತ್ವದ ಮೇಲೆ ನಂಬಿಕೆಯಿಟ್ಟವರು. ಇಂದು ಹಳೆ ಮೈಸೂರು ಪ್ರಾಂತ್ಯದಲ್ಲಿ ನಡೆದಂತೆ ರಾಜ್ಯದಾದ್ಯಂತ ನಿಮ್ಮ ಸುಳ್ಳುಗಳನ್ನು ಒಕ್ಕಲಿಗರು ಒಡೆಯಲಿದ್ದಾರೆ. ಸತ್ಯಮೇವ ಜಯತೆ!' ಎಂದು ಜೆಡಿಎಸ್ ಟ್ವಟಿರ್ ನಲ್ಲಿ ಬರೆದುಕೊಂಡಿದೆ.
ಇದನ್ನೂ ಓದಿ: ಉರಿಗೌಡ, ನಂಜೇಗೌಡ | ಕಲ್ಪನೆ ಮಾಡಿಕೊಂಡು ಬರೆಯೋದು ಕಾದಂಬರಿ ಆಗುತ್ತದೆ: ನಿರ್ಮಲಾನಂದ ಸ್ವಾಮೀಜಿ
ಐತಿಹಾಸಿಕ ವಿಚಾರಕ್ಕೆ ಕೋಮು ಬಣ್ಣ ಹಚ್ಚಿ @BJP4India ಹಿಂದಿನಿಂದಲೂ ರಾಜಕೀಯ ಮಾಡುತ್ತಾ ಬಂದಿದೆ. ಚುನಾವಣೆ ಗೆಲ್ಲಲು @BJP4Karnataka ಯಾವ ಮಟ್ಟಕ್ಕೆ ಇಳಿಯಲಿದೆ ಎಂಬುದಕ್ಕೆ 'ಉರಿನಂಜು' ಕಥೆ ಸಾಕ್ಷಿ. ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ಬಿಜೆಪಿ ಹುಟ್ಟು ಹಾಕಿದ 'ಉರಿ ನಂಜು'ಗೆ ಶ್ರೀಗಳು ಮದ್ದು ಅರೆದಿದ್ದಾರೆ. 1/3 pic.twitter.com/Z6Pb7WqVCq
— Janata Dal Secular (@JanataDal_S) March 20, 2023