ಕೊರೋನ ಪ್ರಕರಣಗಳ ಹೆಚ್ಚಳ: ಜಿಲ್ಲಾವಾರು ಅಗತ್ಯ ಕ್ರಮಕ್ಕೆ ಆರೋಗ್ಯ ಇಲಾಖೆ ಆದೇಶ
ಬೆಂಗಳೂರು, ಮಾ.20: ರಾಜ್ಯದಲ್ಲಿ 5 ತಿಂಗಳಿಂದ ಕೋವಿಡ್-19 ಪರಿಸ್ಥಿತಿಯು ಕೊಂಚ ಹೆಚ್ಚಳ ಕಂಡುಬಂದಿದ್ದು, ಮಾ.15ಕ್ಕೆ ಮುಕ್ತಾಯಗೊಂಡ ವಾರದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.2.77ರಷ್ಟು ಹೆಚ್ಚಿದೆ ಆದ್ದರಿಂದ ಜಿಲ್ಲವಾರು ಪರೀಕ್ಷೆಗಳಲ್ಲಿ ಹೆಚ್ಚಳಗೊಳಿಸುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ ಇಲಾಖೆ ತಿಳಿಸಿದೆ.
ರಾಜ್ಯದ ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ವಾರಗಳಲ್ಲಿ ಹೆಚ್ಚಿನ ಖಚಿತ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಸಕ್ತ ಕೋವಿಡ್-19 ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಗಾವಣೆಯಲ್ಲಿರಿಸಲು ಅಗತ್ಯ ಕ್ರಮಗಳನ್ನು ಹೊರಡಿಸಿದೆ.
ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಓ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರುಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಕೋವಿಡ್ ಪ್ರಕರಣಗಳ ಪರೀಕ್ಷೆ ನಡೆಸಬೇಕು. ಕ್ಲಸ್ಟರ್ ಮಾದರಿಯಲ್ಲಿ ವರದಿಯಾಗುವ ಪ್ರಕರಣಗಳ ಮೇಲ್ವಿಚಾರಣೆ ನಡೆಸಬೇಕು.
ಅಂತಾರಾಷ್ಟ್ರೀಯ ಪ್ರಯಾಣಿಕರು, ಸ್ಥಳೀಯವಾಗಿ ವರದಿಯಾಗುವ ಕ್ಲಸ್ಟರ್ ಪ್ರಕರಣಗಳು ಹಾಗೂ ಸೆಂಟಿನೆಲ್ ಸೈಟ್‍ಗಳಲ್ಲಿ ಸಂಗ್ರಹಿಸಲಾಗುವ ಮಾದರಿಗಳನ್ನು ಚಾಲ್ತಿಯಲ್ಲಿರುವ ಶಿಷ್ಠಾಚಾರದಂತೆ ಜೀನೋಮ್ ಸೀಕ್ವೆನ್ಸಿಂಗ್ ನಡೆಸಬೇಕು ಅಲ್ಲದೆ, ಸ್ಥಳೀಯವಾರು ಹೆಚ್ಚಿನ ಲಸಿಕಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿದೆ.