ಬಜಾಲ್ ನಲ್ಲಿ ಸಲಫಿ ಸಮ್ಮೇಳನ

ಮಂಗಳೂರು, ಮಾ.21: ಕರ್ನಾಟಕ ಸಲಫಿ ಅಸೋಸಿಯೇಶನ್ ಆಶ್ರಯದಲ್ಲಿ 'ಇಸ್ಲಾಮ್ ಶಾಂತಿಗಾಗಿ, ಮೋಕ್ಷಕ್ಕಾಗಿ' ಎಂಬ ಘೋಷವಾಕ್ಯದೊಂದಿಗೆ ಸಲಫಿ ಸಮ್ಮೇಳನ ಮಾ.19ರಂದು ಬಜಾಲ್ ಜಲ್ಲಿಗುಡ್ಡೆಯ ಕಟ್ಟಮಣಿಯಲ್ಲಿ ಜರುಗಿತು.
ಆಲ್ ಬಯನ್, ಅರಬಿಕ್ ಕಾಲೇಜಿನ ಪ್ರಾಧ್ಯಾಪಕ ಶಾಕಿರ್ ಅಹ್ಮದ್ ಮದೀನಿ ಸಮ್ಮೇಳನವನ್ನು ಉದ್ಘಾಟಿಸಿದರು.
ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿದ್ದ ಮೌಲವಿ ಮುಜಾಹಿದ್ ಬಾಲುಶ್ಶೇರಿ ಮಾತನಾಡಿ, ಇಸ್ಲಾಮ್ ಪದದ ಅರ್ಥವೇ ಶಾಂತಿ ಎಂಬುದಾಗಿದೆ. ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್(ಸ.)ರ ಜೀವನ ಸಂದೇಶವು ಮಾನವ ಶಾಂತಿಗಾಗಿ ಇರುವ ಸಂದೇಶವನ್ನು ಸಾರುತ್ತದೆ. ಅಡುಗೆ ಕೋಣೆಯಿಂದ ಹಿಡಿದು ಅಂತಾರಾಷ್ಟ್ರೀಯ ಮಜಲುಗಳಲ್ಲೆಲ್ಲಾ ಒಬ್ಬ ಮಾನವನ ಜೀವನಕ್ಕೆ ಅಗತ್ಯವಾಗಿರುವ ವಿಷಯಗಳನ್ನು ಮನುಷ್ಯನ ಮುಂದಿಟ್ಟಿದೆ ಎಂದು ತಿಳಿಸಿದರು.
ಹಾಫಿಝ್ ಶುನೈಝ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಶಿಹಾಬ್ ಎಡಕ್ಕರ ವಿವರಿಸಿದರು. ಅದೇರೀತಿ ಡಾ.ಮುಹಮ್ಮದ್ ಹಫೀಝ್, ಇಜಾಝ್ ಸ್ವಲಾಹಿ, ಖಲೀಲ್ ತಲಪಾಡಿ, ಹಿಶಾಬ್ ಉಮ್ರಿ, ಅಬ್ದುನ್ನಾಸಿರ್ ಕುಂಜತ್ತೂರು ಮುಂತಾದವರು ವಿವಿಧ ವಿಷಯಗಳಲ್ಲಿ ವಿಚಾರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಟಕ ಸಲಫಿ ಅಸೋಸಿಯೇಶನ್ ಅಧ್ಯಕ್ಷ ಫಿರೋಝ್ ಉಳ್ಳಾಲ್, ಅಲ್ ಬಯಾನ್ ಎಜುಕೇಶನ್ ಅಧ್ಯಕ್ಷ ಮುಹಮ್ಮದ್ ಅಶ್ಫಾಕ್, ಮುಹಮ್ಮದ್ ಶರೀಫ್ ಯು.ಟಿ., ನಜ್ಮುದ್ದೀನ್ ಅಸ್ಸಾದಿ, ಫಾರೂಕ್ ಸುಳ್ಯ, ಅಬ್ದುರ್ರಹ್ಮಾನ್ ಉಳ್ಳಾಲ್, ಶರೀಫ್ ಪುತ್ತೂರು, ಯಾಸಿರ್ ಆಲ್ ಹಿಕಮಿ, ಅಬ್ದುಲ್ ಖಾದರ್ ಆರ್.ಬಿ. ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಮುಹಮ್ಮದ್ ಫಾಝಿಲ್ ಕಿರಾಅತ್ ಪಠಿಸಿದರು. ಮುಹಮ್ಮದ್ ಶಮೀರ್ ಸ್ವಾಗತಿಸಿದರು. ಶಾಕಿರ್ ಉಳ್ಳಾಲ್ ವಂದಿಸಿದರು. ಅಹ್ಮದ್ ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು.