ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುತ್ತಿದ್ದ ಪೌರಕಾರ್ಮಿಕರಿಬ್ಬರು ಮೃತ್ಯು
ದಾವಣಗೆರೆ. ಮಾ.21: ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಸಫಮವಾರ ಸಂಜೆ ವರದಿಯಾಗಿದೆ.
ಮೃತ ಪೌರ ಕಾರ್ಮಿಕರನ್ನು ಸತ್ಯಪ್ಪ (45) ಹಾಗೂ ಮೈಲಪ್ಪ (42) ಎಂದು ಗುರುತಿಸಲಾಗಿದೆ.
ಪಿಡಿಒ ಆದೇಶದ ಮೇರೆಗೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸತ್ಯಪ್ಪ ಮತ್ತು ಮೈಲಪ್ಪ ಮುಂದಾಗಿದ್ದರೆನ್ನಲಾಗಿದ್ದು, ಚರಂಡಿ ಸ್ವಚ್ಛಗೊಳಿಸುವಾಗ ವಿಷ ಗಾಳಿ ಸೇವಿಸಿ ಕಾರ್ಮಿಕರಿಬ್ಬರು ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಹತ್ತಿರದ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು: ಗ್ರಾಮಸ್ಥರ ಆರೋಪ
'ಪಿಡಿಒ ಆದೇಶದ ಮೇರೆಗೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಕೈಗವಸು ಮತ್ತು ಮುಖಗವಸು ನೀಡದೆ ಏಕಾಏಕಿ ಚರಂಡಿಗೆ ಇಳಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಬ್ಬರ ಸಾವು ಸಂಭವಿಸಿದೆ' ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬೀಳಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.