ದ್ವೇಷ ಭಾಷಣ: ಉಚ್ಛಾಟಿತ ಬಿಜೆಪಿ ಶಾಸಕ ರಾಜಾ ಸಿಂಗ್, ಸುರೇಶ್ ಚಾವ್ಹಂಕೆ ವಿರುದ್ಧ ದೂರು ದಾಖಲು
ಆಸ್ತಿ ಹಾನಿ, ಕಲ್ಲು ತೂರಾಟ ಸಂಬಂಧ 7 ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಛತ್ರಪತಿ ಸಂಭಾಜಿನಗರ: ಜನಗರ್ಜನಾ ಸಮಾವೇಶದಿಂದ ಹಿಂದಿರುಗುತ್ತಿದ್ದ ಶಂಕಿತ ವ್ಯಕ್ತಿಗಳು ಸಾರ್ವಜನಿಕ ಸ್ವತ್ತುಗಳಿಗೆ ತೀವ್ರ ಹಾನಿಯನ್ನುಂಟು ಮಾಡಿ, ಕಲ್ಲು ತೂರಾಟ ನಡೆಸಿರುವುದರಿಂದ, ರವಿವಾರ ಮಧ್ಯರಾತ್ರಿ ಶಂಕಿತರ ವಿರುದ್ಧ ಪೊಲೀಸರು ಗಲಭೆ ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿದ ಸೆಕ್ಷನ್‌ಗಳಡಿ ಏಳು ಪ್ರಾಥಮಿಕ ಮಾಹಿತಿ ವರದಿಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು timesofindia ವರದಿ ಮಾಡಿದೆ.
ಪೊಲೀಸರು ತಮ್ಮ ಏಳನೇ ಪ್ರಾಥಮಿಕ ಮಾಹಿತಿ ವರದಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(A) ಅನ್ವಯ ಎರಡು ಭಿನ್ನ ಗುಂಪುಗಳ ನಡುವೆ ಧಾರ್ಮಿಕ, ಜನಾಂಗೀಯ, ಸ್ಥಳ ಮತ್ತಿತರ ನೆಲೆಯಲ್ಲಿ ದ್ವೇಷವನ್ನು ಪ್ರಚೋದಿಸಿದ್ದಾರೆ ಎಂದು ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ರಾಜಾ ಸಿಂಗ್ (Raja Singh) ಹಾಗೂ ಸುರೇಶ್ ಚಾವ್ಹಂಕೆ (Suresh Chavhanke) ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಔರಂಗಾಬಾದ್‌ಗೆ ಛತ್ರಪತಿ ಸಂಭಾಜಿನಗರ ಎಂದು ಮರುನಾಮಕರಣ ಮಾಡಿರುವುದನ್ನು ಬೆಂಬಲಿಸಿ, 'ಸಕಲ್ ಹಿಂದೂ ಏಕತ್ರೀಕರಣ್ ಸಮಿತಿ' ಪಥಸಂಚಲನವನ್ನು ಹಮ್ಮಿಕೊಂಡಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದ ನಗರ ಪೊಲೀಸರು, ನಗರದಾದ್ಯಂತ ನಿಷೇಧಾಜ್ಣೆ ವಿಧಿಸಿದ್ದರು. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ ಶಿಂದೆ ಬಣ), ಮಹಾರಾಷ್ಟ್ರ ನವನಿರ್ಮಾಣ ಸೇನೆ, ಇಸ್ಕಾನ್, ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಅಪಾರ ಪ್ರಮಾಣದ ಕಾರ್ಯಕರ್ತರು ಭಾಗವಹಿಸಿದ್ದರು.
ಮೂರನೆ ಪ್ರಾಥಮಿಕ ಮಾಹಿತಿ ವರದಿಯಲ್ಲಿ ಕಾರ್ಯಕ್ರಮದ ಆಯೋಜಕರ ವಿರುದ್ಧ ನಿಷೇಧಾಜ್ಞೆ ಉಲ್ಲಂಘಿಸಿ ಸಭೆ ಸೇರಿದ ಆರೋಪದಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ನಾಲ್ಕನೆ ಪ್ರಾಥಮಿಕ ಮಾಹಿತಿ ವರದಿಯಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕಾಗಿ ರಾಜಾ ಸಿಂಗ್ ಹಾಗೂ ಚವ್ಹಾಂಕೆ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕೋಮು ಪ್ರಚೋದಕ ಭಾಷಣ ಮಾಡಿದ್ದರಿಂದಾಗಿ ಜನಸಂದಣಿಯಲ್ಲಿದ್ದ ಕೆಲವರು ಮನೆಗೆ ಮರಳುವಾಗ ಸ್ತಿಮಿತ ಕಳೆದುಕೊಂಡು ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹರಿದು ಹಾಕಿ, ಔರಂಗಾಬಾದ್ ಎಂಬ ಹೆಸರಿರುವ ಬಿತ್ತಿ ಫಲಕವನ್ನು ಕೆಳಗಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 2022ರಲ್ಲಿ ತೀವ್ರ ಮಾನವ ಹಕ್ಕು ಉಲ್ಲಂಘನೆಗೆ ಸಾಕ್ಷಿಯಾದ ಭಾರತ: ಅಮೆರಿಕಾ ವರದಿ