ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಲು ದ.ಕ.ಜಿಪಂ ಸಿಇಒ ಕರೆ
ಮಂಗಳೂರು: ದ.ಕ. ಜಿಲ್ಲೆಯ 94 ಪರೀಕ್ಷಾ ಕೇಂದ್ರಗಳಲ್ಲಿ ಮಾ.31ರಿಂದ ಆರಂಭವಾಗುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಲೋಪಗಳು ಎದುರಾಗದಂತೆ ಮತ್ತು ವ್ಯವಸ್ಥಿತವಾಗಿ ಯಶಸ್ವಿಯಾಗಿ ನಡೆಸಿ ಜಿಲ್ಲೆಗೆ ಕೀರ್ತಿ ತರುವಂತೆ ದ.ಕ.ಜಿಪಂ ಸಿಇಒ ಡಾ. ಕುಮಾರ್ ಕರೆ ನೀಡಿದರು.
ನಗರದ ಕೊಟ್ಟಾರದಲ್ಲಿರುವ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಎಸೆಸೆಲ್ಸಿ ಪರೀಕ್ಷೆಯ ಸುಸೂತ್ರ ಆಯೋಜನೆ ಕುರಿತಂತೆ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಅನುಭವವಿದೆ ಹಾಗೂ ಕೌಶಲವೂ ಇದೆ. ಆದಾಗ್ಯೂ ಸಮಸ್ಯೆಗಳು ಬಾರದಂತೆ ದೋಷಗಳಿಗೆ ಕಾರಣವಾಗದಂತೆ ಈ ಪರೀಕ್ಷೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿಯೂ ಇದೆ. ಅದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಸೂಕ್ತವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ರ್ಯಾಂಪ್, ಫ್ಯಾನ್, ಕುಡಿಯುವ ನೀರು, ಶೌಚಾಲಯ, ಡೆಸ್ಕ್ಗಳು ಉತ್ತಮ ಸ್ಥಿತಿಯಲ್ಲಿರಬೇಕು, ಯಾವುದೇ ಅವ್ಯವಸ್ಥೆಗಳಿಲ್ಲದಂತೆ ಮುನ್ನೆಚ್ಚರಿಕ ಕ್ರಮಗಳನ್ನು ವಹಿಸಬೇಕು. ಸಿಸಿಟಿವಿ ಅಳವಡಿಸಬೇಕು, ನೋಟಿಸ್ ಬೋರ್ಡ್ ಹಾಕಬೇಕು ಎಂದು ದ.ಕ.ಜಿಪಂ ಸಿಇಒ ಸೂಚಿಸಿದರು.
ಪರೀಕ್ಷಾ ಕಾರ್ಯಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದೆ, ಪರೀಕ್ಷಾ ಸಮಯದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗುವುದು. ಪರೀಕ್ಷಾ ವೇಳೆಯಲ್ಲಿ ಜಾತ್ರೆ ಅಥವಾ ಸಂತೆಗಳು ನಡೆಯುವುದಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದ ಅವರು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿದರು.
ಬೇಸಿಗೆ ಕಾಲವಾದ ಕಾರಣ ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಒಆರ್ಎಸ್ ಪಾಕೇಟ್ಗಳನ್ನು ಸಿದ್ಧಪಡಿಸಿರಬೇಕು. ಕೆಎಸ್ಸಾರ್ಟಿಸಿ ಬಸ್ಗಳನ್ನು ಸಜ್ಜುಗೊಳಿಸಬೇಕು ಎಂದ ಡಾ.ಕುಮಾರ್ ಮೆಸ್ಕಾಂನಿಂದ ವಿದ್ಯುತ್ ಅಡಚಣೆಯಾಗದಂತೆ ಹಾಗೂ ಆ ಸಂದರ್ಭ ಅನಿಯಮಿತ ವಿದ್ಯುತ್ ಪೂರೈಕೆಗೆ ಸೂಕ್ತ ಕ್ರಮವಹಿಸುವ ಬಗ್ಗೆ ನಿರ್ದೇಶನ ನೀಡಿದರು.
ಕೆಲವೊಂದು ಶಾಲೆಗಳಲ್ಲಿ ವಿದ್ಯುತ್ ದೀಪ, ನಳ್ಳಿಗಳು ಇಲ್ಲ. ಬಾಗಿಲು ಮುರಿದಿದೆ. ಅವುಗಳ ದುರಸ್ತಿಗೆ 30 ಲಕ್ಷ ರೂ.ಗಳ ಅನುದಾನವ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಬಳಸಿ ಕೂಡಲೇ ದುರಸ್ತಿ ಕಾರ್ಯ ನಿರ್ವಹಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದಯಾನಂದ ನಾಯಕ್ ಮಾತನಾಡಿ, ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಪೊಲೀಸ್ ಬಂದೋಬಸ್ತಿನೊಂದಿಗೆ ಆಗಮಿಸಿ ಪ್ರಶ್ನೆ ಪತ್ರಿಕೆಯನ್ನು ಪಡೆದು ಖಜಾನೆಯಲ್ಲಿ ಸುರಕ್ಷಿತವಾಗಿ ಇರಿಸಬೇಕು. ಯಾವುದೇ ಕಾರಣಕ್ಕೂ ಯಾವುದೇ ವಿದ್ಯಾರ್ಥಿಗೆ ನೆಲ ಅಥವಾ ಜಗಲಿಯ ಮೇಲೆ ಪರೀಕ್ಷೆ ಬರೆಯಲು ಅವಕಾಶ ಕೊಡಬಾರದು. ಡೆಸ್ಕ್ ಕೊರತೆಯಿದ್ದರೆ ಮತ್ತೊಂದು ಶಾಲೆಯಿಂದ ಪಡೆಯಬೇಕು. 94 ಪರೀಕ್ಷಾ ಕೇಂದ್ರಗಳಿಗೆ ಅಳವಡಿಸಲಾಗುವ ಸಿಸಿಟಿವಿಯ ಫೂಟೇಜನ್ನು ಪರೀಕ್ಷೆ ಮುಗಿದ ಕೂಡಲೇ ಆಯಾ ಬಿಇಒಗಳಿಗೆ ಸಲ್ಲಿಸಬೇಕು. ನಂತರ ಅದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಮೇಲ್ವಿಚಾರಕರು ಹಾಗೂ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದ್ದರು.