ಮಹಿಳಾ ಪ್ರೀಮಿಯರ್ ಲೀಗ್: ಗೆಲುವಿನ ಹಳಿಗೆ ಮರಳಿದ ಮುಂಬೈ, ಆರ್‌ಸಿಬಿ ಅಭಿಯಾನ ಅಂತ್ಯ

ನವಮುಂಬೈ, ಮಾ.21: ಮಹಿಳಾ ಪ್ರೀಮಿಯರ್ ಲೀಗ್(ಡಬ್ಲುಪಿಎಲ್)ನ 19ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿದೆ. ಮತ್ತೊಂದೆಡೆ ಆರ್‌ಸಿಬಿ ಸೋಲಿನೊಂದಿಗೆ ಲೀಗ್‌ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಗೆಲ್ಲಲು 126 ರನ್ ಸುಲಭ ಸವಾಲು ಪಡೆದ ಮುಂಬೈ 16.3 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 129 ರನ್ ಗಳಿಸಿದೆ.
8ನೇ ಪಂದ್ಯದಲ್ಲಿ 6ನೇ ಗೆಲುವು ದಾಖಲಿಸಿ ಒಟ್ಟು 12 ಅಂಕ ಕಲೆ ಹಾಕಿರುವ ಮುಂಬೈ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಆರ್‌ಸಿಬಿ 8 ಪಂದ್ಯಗಳಲ್ಲಿ 6ನೇ ಸೋಲು ಕಂಡಿದೆ.
ಆರಂಭಿಕ ಆಟಗಾರ್ತಿ ಯಸ್ತಿಕಾ ಭಾಟಿಯಾ(30 ರನ್, 26 ಎಸೆತ), ಹ್ಯಾಲಿ ಮ್ಯಾಥ್ಯೂಸ್(24 ರನ್, 17 ಎಸೆತ) ಮೊದಲ ವಿಕೆಟಿಗೆ 6 ಓವರ್‌ಗಳಲ್ಲಿ 53 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.ಆದರೆ ಮುಂಬೈ 73 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಆಗ 5ನೇ ವಿಕೆಟಿಗೆ 47 ರನ್ ಜೊತೆಯಾಟ ನಡೆಸಿದ ಅಮೆಲಿಯಾ ಕೆರ್ರ್(ಔಟಾಗದೆ 31, 27 ಎಸೆತ) ಹಾಗೂ ಪೂಜಾ ವಸ್ತ್ರಕರ್(19 ರನ್, 18 ಎಸೆತ) ತಂಡಕ್ಕೆ ಆಸರೆಯಾದರು. ಆರ್‌ಸಿಬಿ ಪರ ಕನಿಕಾ ಅಹುಜಾ(2-5) ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಮಂಗಳವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಗಿದೆ.