ವೈಎಸ್‍ವಿ ದತ್ತ ದೇವೇಗೌಡರಿಗೆ ವಿಷವುಣಿಸಿ ಹೋದರು: ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ
ಕಡೂರು, ಮಾ.21: ದೇವೇಗೌಡರ ಮಾನಸ ಪತ್ರ ಎಂದು ಕರೆಸಿಕೊಳ್ಳುತ್ತಿದ್ದ ದತ್ತ ಅವರೇ ತಂದೆಗೆ ವಿಷ ಉಣಿಸಿ ಹೋದರು ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಮಂಗಳವಾರ ಕಡೂರು ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂತನ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
''ದತ್ತ ಅವರನ್ನು ಕೆಲವು ವ್ಯಕ್ತಿಗಳು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ ತಮ್ಮ ಅಧಿಕಾರದ ಆಸೆಗೆ ದತ್ತ ಅವರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕೋಮುವಾದಿ ಶಕ್ತಿಯನ್ನು ಹೊರಗಿಡಲು ತಾವು ಕಾಂಗ್ರೆಸ್ ಸೇರಿದ್ದಾಗಿ ಹೇಳುವ ದತ್ತ ಅವರು ಕಡೂರು ಮತ್ತು ಬೀರೂರು ಪುರಸಭೆ ಅಧಿಕಾರ ಹಿಡಿಯುವಲ್ಲಿ ಏಕೆ ಕಾಂಗ್ರೆಸ್ ಜೊತೆಗೆ ಹೋಗಲಿಲ್ಲ'' ಎಂದು ಟೀಕಿಸಿದರು.
''ಕಾರ್ಯಕರ್ತರು ಧೃತಿಗೆಡದೆ ಅವಶ್ಯಕತೆ ಇಲ್ಲ, ಬೆನ್ನಿಗೆ ಚೂರಿ ಹಾಕಿ ದೊಡ್ಡ ದೊಡ್ಡ ಮಾತುಗಳನ್ನು ಆಡಿ ದತ್ತ ಪಕ್ಷ ತೊರೆದಿದ್ದಾರೆ. ಕಾರ್ಯಕರ್ತರ ನೈತಿಕ ಬೆಂಬಲ ಇದ್ದರೆ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಕಟ್ಟುತ್ತೇವೆ. ಮುಸ್ಲಿಮರ ಬಗ್ಗೆ ದತ್ತ ಅವರಿಗೆ ಕಿಂಚಿತ್ ಗೌರವ ಇದ್ದಿದ್ದರೆ ಪಕ್ಷ ಬಿಡುವ ಕೆಲಸ ಮಾಡುತ್ತಿರಲಿಲ್ಲ. ದೇವೇಗೌಡರ ಮತ್ತು ಪಕ್ಷದ ಋಣ ಅವರ ಮೇಲಿದೆ, ನಮ್ಮ ಪಕ್ಷದಿಂದಲೇ ವಿಧಾನ ಪರಿಷತ್ ಸದಸ್ಯರಾಗಿ ಮತ್ತು ಶಾಸಕರಾಗಿ ಆಯ್ಕೆ ಆಗಿದ್ದರು, ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಮೂಲೆಗುಂಪು ಮಾಡಿದ್ದಾರೆ, ಫ್ಲೆಕ್ಸ್ ಗಳಲ್ಲಿ ಅವರ ಭಾವಚಿತ್ರವನ್ನೂ ಬಳಸಲು ಹಿಂಜರಿಯುತ್ತಿದ್ದಾರೆ'' ಎಂದು ವ್ಯಂಗ್ಯವಾಡಿದರು.
''ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ನಿರಾಶರಾಗಬೇಕಿಲ್ಲ. ಬಸ್ ಚಾಲಕ ಮಾತ್ರ ಹೊರಹೋಗಿದ್ದಾರೆ, ಮುಂದಿನ ದಿನಗಳಲ್ಲಿ ನಾವು ಪಕ್ಷದ ಬಲವರ್ಧನೆಗೆ ಶ್ರಮಿಸಿದ, ಕುಮಾರಸ್ವಾಮಿ ಅವರನ್ನು ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಮಾಡೋಣ'' ಎಂದರು.
ಕಡೂರು ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಸಿ.ಎಂ. ಧನಂಜಯ ನೇತೃತ್ವದಲ್ಲಿ ಕಡೂರು ಕ್ಷೇತ್ರದಲ್ಲಿ ಗೆಲುವು ನಿಶ್ಚಯವಾಗಿ ನಮ್ಮದೇ ಎಂದರು. ಕ್ಷೇತ್ರದ ಅಭಿವೃದ್ಧಿ ನಮ್ಮ ಮೊದಲ ಆದ್ಯತೆ, ನಿಮ್ಮ ಬೆಂಬಲ ನಮಗೆ ನೀಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದರು.
ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಂ. ಧನಂಜಯ್, ಜಿಲ್ಲಾ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಯುವ ಘಟಕದ ರಾಜ್ಯ ಕಾರ್ಯದರ್ಶಿ ಸಿ.ಎಚ್. ಪ್ರೇಮಕುಮಾರ್, ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಪುರಸಭೆ ಸದಸ್ಯ ಮರಗುದ್ದಿ ಮನು, ಕೆಎಂಎಫ್ ನಿರ್ದೇಶಕ ಬಿದರೆ ಜಗದೀಶ್, ಜೆಡಿಎಸ್ ಮುಖಂಡರಾದ ನಾಗಪ್ಪ, ಗಂಗಾಧರನಾಯ್ಕ, ಸರಸ್ವತಿಪುರ ಪುಟ್ಟೇಗೌಡ, ಯಶವಂತ ಕಂಚಿ ಮುಂತಾದವರು ಇದ್ದರು