ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗೆ ಡಿಸಿಯಿಂದ ಸ್ಥಳದಲ್ಲೇ ಪರಿಹಾರ: ಬಗೆಹರಿದ ‘ಟ್ರಾನ್ಸ್‌ಜೆಂಡರ್ ಕಾರ್ಡ್’ ಸಮಸ್ಯೆ
ಉಡುಪಿ: ಲಿಂಗತ್ವ ಅಲ್ಪಸಂಖ್ಯಾತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ಕುರಿತಂತೆ ಅವರ ಗುರುತಿನ ಬಗ್ಗೆ ದೃಡೀಕರಿಸಲು ಅತ್ಯಂತ ಅಗತ್ಯವಾಗಿದ್ದ ‘ಟ್ರಾನ್ಸ್‌ಜೆಂಡರ್ ಕಾರ್ಡ್’ಗಳನ್ನು ಪಡೆಯಲು ಅನುಭಸುತ್ತಿದ್ದ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಸ್ಥಳದಲ್ಲೇ ಈ ಕಾರ್ಡ್ ನೀಡಲು ಅರ್ಜಿಗಳನ್ನು ಅವರಿಗೆ ನೀಡಿ, ತಕ್ಷಣವೇ ನೊಂದಣಿ ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಬಹುಕಾಲದ ಮತ್ತು ಅತ್ಯಂತ ಪ್ರಮುಖ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.
ಮಂಗಳವಾರ ಬ್ರಹ್ಮಗಿರಿಯ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಸಮೂಹ ಸಂಸ್ಥೆ(ಗಾರ್ಡ್), ಆಶ್ರಯ ಸಮುದಾಯ ಸಂಘಟನೆ, ಲಯನ್ಸ್ ಕ್ಲಬ್ ಲಕ್ಷ್ಯ ಉಡುಪಿ ಹಾಗೂ ಲಯನ್ಸ್ ಕ್ಲಬ್ ಬನ್ನಂಜೆ ಇವರ ಸಂಯುಕ್ತ ಆಶ್ರಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರ ಸಮುದಾಯ ಸಂಗಮ ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಾತನಾಡಿದರು.
ಸಂವಿಧಾನವು ಪ್ರತಿಯೊಬ್ಬರೂ ಗೌರವಯುತವಾಗಿ ಮತ್ತು ಸ್ವಾಭಿಮಾನ ದಿಂದ ಬದುಕುವ ಹಕ್ಕು ನೀಡಿದ್ದು, ಲಿಂಗತ್ವ ಅಲ್ಪಸಂಖ್ಯಾತರೂ ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಬದುಕಲು ಅಗತ್ಯವಿರುವ ಎಲ್ಲಾ ಅವಕಾಶಗಳು ಇವೆ. ಜಿಲ್ಲಾಡಳಿತದ ವತಿಯಿಂದ ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಇವರು ಆರ್ಥಿಕವಾಗಿ ಸ್ವಾವಲಂಬಿಯಾಗಲು, ವಿವಿಧ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅಗತ್ಯವಿರುವ ಅನುದಾನ ಬಿಡುಗಡೆಗೆ ಈಗಾಗಲೇ ಪತ್ರ ಬರೆದಿದ್ದು ಶೀಘ್ರದಲ್ಲಿಯೇ ಈ ಸೌಲಭ್ಯಗಳು ದೊರೆಯಲಿವೆ ಎಂದರು.
ಲಿಂಗತ್ವ ಅಲ್ಪಸಂಖ್ಯಾತರು ಸೂಕ್ಷ್ಮ ಸಮುದಾಯಕ್ಕೆ ಸೇರಿದ್ದು, ಅಧಿಕಾರಿಗಳು ಇವರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದ ಜಿಲ್ಲಾಧಿಕಾರಿ, ಈ ಸಮುದಾಯದವರಿಗೆ ಆಧಾರ್ ಕಾರ್ಡ್‌ನಲ್ಲಿ ಆಗಬೇಕಿರುವ ಅಗತ್ಯ ಬದಲಾವಣೆಗಳ ಕುರಿತಂತೆ ಅವರಿಗೆ ಪ್ರತ್ಯೇಕವಾದ ಶಿಬಿರ ಆಯೋಜಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿ ಕೊಡುವಂತೆ ಮತ್ತು ಪಿಂಚಣಿ ಸೌಲಭ್ಯ ಪಡೆಯದೇ ಇರುವವರನ್ನು ಗುರುತಿಸಿ ಪಿಂಚಣಿ ಸೌಲಭ್ಯ ಒದಗಿಸುವಂತೆ ಹಾಗೂ ಯಾವುದೇ ಸಂದರ್ಭದಲ್ಲಿ ಅವರ ಗೌಪ್ಯತೆಯ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಟ್ರಾನ್ಸ್‌ಜೆಂಡರ್ ಕಾರ್ಡ್ ನೀಡುವ ಕುರಿತಂತೆ ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ, ಬ್ರಹ್ಮಗಿರಿಯ ಬಾಲಭವನದಲ್ಲಿ ಕೂಡಲೇ ವಿಶೇಷ ನೊಂದಣಿ ಶಿಬಿರ ಆಯೋಜಿಸಿ, ಸುಮಾರು 20 ಮಂದಿಯ ನೊಂದಣಿಯನ್ನು ಮಾಡಿ, ಗುರುತಿನ ಚೀಟಿ ನೀಡುವ ಮುಂದಿನ ಕ್ರಮಕ್ಕೆ ಸಲ್ಲಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಟ್ಟು 41 ಮನೆಗಳು ಮಂಜೂರಾಗಿದ್ದು, ಶೀಘ್ರದಲ್ಲಿ ಅವುಗಳ ವಿತರಣೆ ನಡೆಯಲಿದೆ. ಆರ್ಥಿಕ ಚಟುವಟಿಕೆಗಳನ್ನು ನಡೆಸಲು 5 ಲಕ್ಷ ರೂ. ನೆರವು ನೀಡುವ ಕುರಿತ ಪ್ರಸ್ತಾವನೆ ಯನ್ನು ಸಲ್ಲಿಸಲಾಗಿದೆ.
ಸ್ವಸಹಾಯಕ ಸಂಘಗಳನ್ನು ಸ್ಥಾಪಿಸಿಕೊಂಡಲ್ಲಿ ಗರಿಷ್ಠ ಆರ್ಥಿಕ ನೆರವು ಪಡೆಯಲು ಸಾಧ್ಯವಿದ್ದು, ಸಮುದಾಯದವರು ಸಂಘಟಿತರಾಗಿ ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಸಮೀಕ್ಷಾ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸರಕಾರದಿಂದ ನೀಡಬೇಕಾದ ಅಗತ್ಯ ನೆರವಿನ ಬಗ್ಗೆ ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ಉಡುಪಿ ತಹಶೀಲ್ದಾರ್ ರವಿ ಅಂಗಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಲಯನ್ಸ್ ಕ್ಲಬ್ ಲಕ್ಷ್ಯ ಉಡುಪಿಯ ಅಧ್ಯಕ್ಷ ರಮೇಶ್ ಕೆ. ಶೆಟ್ಟಿ, ಬನ್ನಂಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ವಸಂತಿ ಕಿದಿಯೂರು, ಗಾರ್ಡ್ ಸಂಸ್ಥೆಯ ಸೌಜನ್ಯ ಶೆಟ್ಟಿ, ಆಶ್ರಯ ಸಮುದಾಯ ಸಂಘಟನೆಯ ಅಧ್ಯಕ್ಷ ಸುದರ್ಶನ್, ಆಸರೆ ಸಮುದಾಯ ಸಂಘಟನೆಯ ಅಧ್ಯಕ್ಷ ಸಂಜೀವ ವಂಡ್ಸೆ, ದಮನಿತ ಮಹಿಳೆಯರ ಪ್ರತಿನಿಧಿ ಅಮೃತಾ ಮತ್ತಿತರರು ಉಪಸ್ಥಿತರಿದ್ದರು.
ಗಾರ್ಡ್ ಸಂಸ್ಥೆಯ ಚಂದ್ರಿಕಾ ಸ್ವಾಗತಿಸಿದರು. ರೇಣುಕಾ ವಂದಿಸಿ, ನರೇಶ್ ಕಾರ್ಯಕ್ರಮ ನಿರೂಪಿಸಿದರು.