"ಕೆಲವು ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿಗಳು ಎಂಬ ಕಾನೂನು ಸಚಿವರ ಹೇಳಿಕೆ ಭಿನ್ನಾಭಿಪ್ರಾಯ ದಮನದ ಪ್ರಯತ್ನ"
ಮಾಜಿ ನ್ಯಾಯಾಧೀಶೆ ರೇಖಾ ಶರ್ಮಾ
ಹೊಸದಿಲ್ಲಿ, ಮಾ.21: ಕೆಲವು ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್ನ ಭಾಗವಾಗಿದ್ದಾರೆ ಮತ್ತು ಇದಕ್ಕಾಗಿ ಅವರು ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಇಂಡಿಯಾ ಟುಡೇ ಸಮ್ಮೇಳನಲ್ಲಿ ನೀಡಿರುವ ಹೇಳಿಕೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ರೇಖಾ ಶರ್ಮಾ ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಕಾನೂನು ಸಚಿವರು ನಿವೃತ್ತ ನ್ಯಾಯಾಧೀಶರನ್ನು ಅಮೃತಪಾಲ್ ಸಿಂಗ್ ಜೊತೆ ಸಮೀಕರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ನ್ಯಾ.ಶರ್ಮಾ, ಕಾನೂನು ಸಚಿವರಿಂದ ಇಂತಹ ಹೇಳಿಕೆಯನ್ನು ಕೇಳುವುದು ಅತ್ಯಂತ ದುರದೃಷ್ಟಕರವಾಗಿದೆ. ಇದು ಅನಗತ್ಯ ಆಕ್ರಮಣ ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.
ದಿ ವೈರ್ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ‘ಏಜೆನ್ಸಿಗಳು ಕಾನೂನಿಗನುಗುಣವಾಗಿ ಕ್ರಮವನ್ನು ತೆಗೆದುಕೊಳ್ಳಲಿವೆ,ದೇಶದ ವಿರುದ್ಧ ಕೆಲಸ ಮಾಡಿದವರು ಅದಕ್ಕಾಗಿ ಬೆಲೆ ತೆರಬೇಕಾಗುತ್ತದೆ ಎಂಬ ಕಾನೂನು ಸಚಿವರ ಹೇಳಿಕೆಯು ಅವರು ಭಾರತ ವಿರೋಧಿಗಳೆಂದು ಬಣ್ಣಿಸಿರುವ ನಿವೃತ್ತ ನ್ಯಾಯಾಧೀಶರಿಗೆ ಬೆದರಿಕೆಯಾಗಿದೆಯೇ ?’ ಎಂಬ ಪ್ರಶ್ನೆಗೆ ನ್ಯಾ.ಶರ್ಮಾ ‘ಖಂಡಿತವಾಗಿ,ಅದೊಂದು ಬೆದರಿಕೆಯಾಗಿದೆ ’ಎಂದು ಸ್ಪಷ್ಟವಾಗಿ ಉತ್ತರಿಸಿದರು.
ಕಾನೂನು ಸಚಿವರು ತಾನು ಪ್ರಸ್ತಾಪಿಸಿರುವ ನಿವೃತ್ತ ನ್ಯಾಯಾಧೀಶರನ್ನು ನಿರ್ದಿಷ್ಟವಾಗಿ ಹೆಸರಿಸಬೇಕು ಮತ್ತು ಅವರನ್ನು ಭಾರತ ವಿರೋಧಿ ಗ್ಯಾಂಗ್ನ ಭಾಗವಾಗಿಸಿರುವ ಏನನ್ನು ಅವರು ಹೇಳಿದ್ದಾರೆ ಅಥವಾ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಸಂದರ್ಶನದಲ್ಲಿ ಆಗ್ರಹಿಸಿದ ನ್ಯಾ.ಶರ್ಮಾ,ಅಸ್ಪಷ್ಟ ಶಬ್ದಗಳಲ್ಲಿ ಮಾತನಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಸಂದರ್ಶನದ ಅಂತ್ಯದಲ್ಲಿ ಮತ್ತೆ ಅತ್ಯಂತ ತೀವ್ರವಾಗಿ ಕಿಡಿಕಾರಿದ ಅವರು,ಸಚಿವರು ಮತ್ತು ಸರಕಾರಕ್ಕೆ ಅನ್ವಯಿಸುವ ಲಕ್ಷ್ಮಣ ರೇಖೆಯೊಂದಿದೆ ಮತ್ತು ಅದು ಭಾರತದ ಸಂವಿಧಾನವಾಗಿದೆ ಎಂದು ಹೇಳಿದರು.
ರಿಜಿಜು ಪ್ರಸ್ತಾಪಿಸಿದ್ದ,ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ಅವರ ಎನ್ಜಿಒ ಆಯೋಜಿಸಿದ್ದ ವಿಚಾರ ಸಂಕಿರಣದ ಕುರಿತೂ ನ್ಯಾ.ಶರ್ಮಾ ಸುದೀರ್ಘವಾಗಿ ಮಾತನಾಡಿದರು. ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಯು.ಯು.ಲಲಿತ್,ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಮದನ ಲೋಕೂರ್ ಮತ್ತು ದೀಪಕ ಗುಪ್ತಾ ಹಾಗೂ ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎ.ಪಿ.ಶಾ ಅವರು ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.
ವಿಚಾರ ಸಂಕಿರಣವು ದೇಶ ವಿರೋಧಿಯಾಗಿರಲಿಲ್ಲ ಮತ್ತು ಅಲ್ಲಿ ಉಪಸ್ಥಿತರಿದ್ದ ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿಗಳು ಎಂಬ ರಿಜಿಜು ಅವರ ಬಣ್ಣನೆಯನ್ನು ಸಮರ್ಥಿಸುವಂತಹ ಯಾವುದೂ ಅಲ್ಲಿ ನಡೆದಿರಲಿಲ್ಲ ಎಂದೂ ನ್ಯಾ.ಶರ್ಮಾ ಹೇಳಿದರು.