ಪಿಎಫ್‌ಐ, ಸಹಸಂಘಟನೆಗಳ ಮೇಲಿನ ನಿಷೇಧವನ್ನು ಎತ್ತಿ ಹಿಡಿದ ಯುಎಪಿಎ ಟ್ರಿಬ್ಯುನಲ್
ಹೊಸದಿಲ್ಲಿ: ಪಿಎಫ್‌ಐ ಮತ್ತದರ ಏಳು ಸಹಸಂಘಟನೆಗಳ ಮೇಲಿನ ನಿಷೇಧವನ್ನು ಯುಎಪಿಎ (UAPA) ಅಡಿಯಲ್ಲಿ ರಚಿಸಲಾದ ಟ್ರಿಬ್ಯುನಲ್ ಮಂಗಳವಾರ ಎತ್ತಿ ಹಿಡಿದಿದೆಯಲ್ಲದೆ ಪಿಎಫ್‌ಐ (PFI) ಮತ್ತದರ ಸಹ ಸಂಘಟನೆಗಳು ಭಾರತದಲ್ಲಿ 2047ರೊಳಗಾಗಿ ಖಲೀಫ ಆಡಳಿತ ಸ್ಥಾಫಿಸುವ ಉದ್ದೇಶ ಹೊಂದಿದ್ದವು ಎಂದು ಹೇಳಿದೆ.
ಪಿಎಫ್‌ಐ ಮತ್ತದರ ಸಹಸಂಘಟನೆಗಳ ವಿರುದ್ಧ ಮಂಡಿಸಲಾದ ಸಾಕ್ಷ್ಯವು ವಿಶ್ವಾಸಾರ್ಹವಾಗಿದೆ ಎಂದು ದಿಲ್ಲಿ ಹೈಕೋರ್ಟಿನ ಜಸ್ಟಿಸ್ ದಿನೇಶ್ ಕುಮಾರ್ ಶರ್ಮ ಅವರ ನೇತೃತ್ವದ ಟ್ರಿಬ್ಯುನಲ್ ಹೇಳಿದೆ ಹಾಗೂ "ಈ ಸಂಘಟನೆಗಳು ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ರಚಿಸುವ ಉದ್ದೇಶ ಹೊಂದಿದ್ದವು ಹಾಗೂ ಹಿಂದು ಸಮುದಾಯದ ರಾಜಕೀಯ ಪ್ರಮುಖರ ಕೊಲೆಗಳನ್ನು ನಡೆಸಿವೆ," ಎಂದು ಕೇಂದ್ರದ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದೆ.
ಪಿಎಫ್‌ಐ ಚಟುವಟಿಕೆಗಳ ಕುರಿತಂತೆ ಸಾಕಷ್ಟು ಸಾಕ್ಷ್ಯಾಧಾರ ಹಾಜರುಪಡಿಸಲು ಕೇಂದ್ರ ಸರ್ಕಾರ ಸಫಲವಾಗಿದೆ ಎಂಬ ಅಂಶವನ್ನು ಟ್ರಿಬ್ಯುನಲ್ ಕಂಡುಕೊಂಡಿದೆ ಎಂದು ಕೇಂದ್ರದ ಪರ ಹಾಜರಿದ್ದ ಹಿರಿಯ ವಕೀಲ ಪುನೀತ್ ಮಿತ್ತಲ್ ಹೇಳಿದರು.
ಅದೇ ಸಮಯ ಪ್ರತಿವಾದಿಗಳು ತಮ್ಮ ಪರವಾಗಿ ಯಾವುದೇ ಸಾಕ್ಷ್ಯಾಧಾರ ಒದಗಿಸಲು ವಿಫಲರಾಗಿದ್ದಾರೆ ಎಂದು ಮಿತ್ತಲ್ ಹೇಳಿದರು.
ಈ ಸಂಘಟನೆಗಳು ಕಡತಗಳಲ್ಲಿ ಪ್ರಶಂಸಾರ್ಹ ಉದ್ದೇಶವನ್ನು ಹೊಂದಿದ್ದರೂ ಅವುಗಳು ನಡೆಸುವ ಅಕ್ರಮ ಚಟುವಟಿಕೆಗಳು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯವೊಡ್ಡಿವೆ ಎಂದು ಕೇಂದ್ರದ ಅಭಿಪ್ರಾಯವನ್ನು ತನ್ನ 285 ಪುಟಗಳ ವರದಿಯಲ್ಲಿ ಟ್ರಿಬ್ಯುನಲ್ ಒಪ್ಪಿದೆ.
"ಅವುಗಳು ಕಾನೂನಾತ್ಮಕ ಸಂಘಟನೆಗಳಾಗಿದ್ದರೂ ಅವುಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಅವುಗಳು ಕಾನೂನುಬಾಹಿರ ಸಂಘಟನೆಗಳು," ಎಂದು ಟ್ರಿಬ್ಯುನಲ್ ಆದೇಶ ಉಲ್ಲೇಖಿಸಿ ಸರ್ಕಾರದ ವಕೀಲರು ತಿಳಿಸಿದ್ದಾರೆ.
ಕಾನೂನಿನ ಪ್ರಕಾರ ಟ್ರಿಬ್ಯುನಲ್ ತನ್ನ ಆದೇಶವನ್ನು ಸೀಲ್ ಕವರಿನಲ್ಲಿ ಗೃಹ ಸಚಿವಾಲಯಕ್ಕೆ ನೀಡಬೇಕಿದ್ದು ನಂತರ ಆ ಕುರಿತ ಮಾಹಿತಿಯನ್ನು ಸಚಿವಾಲಯ ಗಜೆಟ್ ಅಧಿಸೂಚನೆ ಮೂಲಕ ನೀಡಬೇಕಿದೆ.
ಮೂರು ನಾಲ್ಕು ತಿಂಗಳ ಅವಧಿಯಲ್ಲಿ ಟ್ರಿಬ್ಯುನಲ್ ಸದಸ್ಯರು ಮುಂಬೈ, ಬೆಂಗಳೂರು, ಚೆನ್ನೈ, ದಿಲ್ಲಿ, ಲಕ್ನೋ ಸಹಿತ ಇತರ ನಗರಗಳಿಗೆ ತೆರಳಿ ಡಿಸೆಂಬರ್ 19, 2022 ಹಾಗೂ ಮಾರ್ಚ್ 3, 2023 ರ ನಡುವೆ ಕೇಂದ್ರ ಗೃಹ ಸಚಿವಾಲಯ ಹಾಜರುಪಡಿಸಿದ್ದ 100 ಸಾಕ್ಷ್ಯಗಳ ವಿಚಾರಣೆ ನಡೆಸಿತ್ತು.
ಪಿಎಫ್‌ಐ ಮತ್ತದರ ಸಹ ಸಂಘಟನೆಗಳಾದ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಝೇಶನ್, ನ್ಯಾಷನಲ್ ವಿಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳ ಇವುಗಳನ್ನು ಕೇಂದ್ರ ಗೃಹ ಸಚಿವಾಲಯ ತನ್ನ ಸೆಪ್ಟೆಂಬರ್ 27, 2022ರ ಗಜೆಟ್ ಅಧಿಸೂಚನೆ ಮೂಲಕ ನಿಷೇಧಿಸಿತ್ತು.