ಶಾಸಕ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಪಟ್ಟು: ಸಿ.ಟಿ ರವಿ ನಿವಾಸಕ್ಕೆ ಮುತ್ತಿಗೆ
ಚಿಕ್ಕಮಗಳೂರು, ಮಾ. 22: ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬಾರದೆಂದು ಪಟ್ಟು ಹಿಡಿದಿರುವ ಕಾರ್ಯಕರ್ತರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ನಿವಾಸಕ್ಕೆ ಮುತ್ತಿಗೆ ಕಾಕಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಹಾಲಿ ಶಾಸಕರು ಕಾರ್ಯಕರ್ತರ ಪರವಾಗಿ ಕೆಲಸ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿ ಯಲ್ಲಿ ಕುಂಠಿತವಾಗಿದೆ. ಇವರು ಮತ್ತೆ ಗೆದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗುತ್ತೆ'' ಎಂದು ಕಾರ್ಯಕರ್ತರು ಶಾಸಕ ಸಿ.ಟಿ ರವಿ ಬಳಿ ತಮ್ಮ ಅಳಲು ತೋಡಿಕೊಂಡರು.
ಈ ವೇಳೆ ಕಾರ್ಯಕರ್ತರ ಮನವೊಲಿಸಲು ಪ್ರಯತ್ನಿಸಿದ ಸಿ.ಟಿ ರವಿ, 'ನಿಮ್ಮ ಮನವಿಯನ್ನು ಸ್ವೀಕರಿಸುತ್ತೇನೆ. ಆದರೆ, ಟಿಕೆಟ್ ಕೊಡುವ ನಿರ್ಧಾರ ಸಂಸದೀಯ ಮಂಡಳಿ ಸಮಿತಿಯದ್ದು. ಆದ್ದರಿಂದ ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು' ಎಂದು ಮನವಿ ಮಾಡಿಕೊಂಡರು.
ಕಳೆದ ವಾರ ಮೂಡಿಗೆರೆಯಲ್ಲಿ ವಿಜಯ ಸಂಕಲ್ಪಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಾರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ವಿಜಯ ಸಂಕಲ್ಪಯಾತ್ರೆ ರದ್ದಾಗಿತ್ತು.