ಬಿಜೆಪಿ ಕೆಲ ಅವಕಾಶವಾದಿಗಳನ್ನಷ್ಟೇ ಸೆಳೆಯಬಹುದು: ಪಿಣರಾಯಿ ವಿಜಯನ್
ಕಣ್ಣೂರು: ರಬ್ಬರ್ ಬೆಲೆ ವಿಚಾರದಲ್ಲಿ ಬಿಜೆಪಿ ಪರ ತಲಶ್ಶೇರಿ ಆರ್ಚ್ಬಿಷಪ್ ಮಾರ್ ಜೋಸೆಫ್ ಪಾಂಪ್ಲಾನಿ ಹೇಳಿಕೆ ನೀಡಿರುವ ಬೆನ್ನಲ್ಲೇ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ "ಕೆಲ ಅವಕಾಶವಾದಿಗಳನ್ನು ನಂಬುವ" ಸಂಘ ಪರಿವಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
"ಅವರು ಕೆಲ ಅವಕಾಶವಾದಿಗಳನ್ನು ಓಲೈಸಬಹುದು. ಅವರ ನಗುವಿಗೆ ಕೆಲವರು ಬಲೆ ಬೀಳಬಹುದು. ಆದರೆ ಬಿಜೆಪಿಯನ್ನು ದೂರ ಇಡುವ ನಿರ್ಧಾರ ಕೈಗೊಂಡಿರುವ ಜನಸಾಮಾನ್ಯರ ನಿಲುವು ಇದಲ್ಲ" ಎಂದು ಪೆರಲ್ಶ್ಶೇರಿಯಲ್ಲಿ ಸಿಪಿಎಂ ಆಯೋಜಿಸಿದ್ದ ಎಕೆಜಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
"ಬಹುಸಂಖ್ಯಾತರಿಂದಾಗಲೀ, ಅಲ್ಪಸಂಖ್ಯಾತರಿಂದಾಗಲೀ ಕೋಮುವಾದವನ್ನು ಕೇರಳ ಸದಾ ವಿರೋಧಿಸುತ್ತಾ ಬಂದಿದೆ. ಎರಡೂ ಅಪಾಯಕಾರಿ ಎನ್ನುವುದು ಜನರಿಗೆ ಮನವರಿಕೆಯಾಗಿದೆ. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಸೋಲುತ್ತಲೇ ಬಂದಿದೆ" ಎಂದು ನುಡಿದರು.
ಚುನಾವಣೆಯಲ್ಲಿ ಬೆಂಬಲ ಕೋರಿ ಅಲ್ಪಸಂಖ್ಯಾತ ಸಮುದಾಯದ ಪ್ರಮುಖರನ್ನು ಭೇಟಿ ಮಾಡುವುದು ಸಂಘ ಪರಿವಾರದ ವೈಖರಿ. ಕೆಲವರು ಸುಲಭವಾಗಿ ಅವರ ಬಲೆಗೆ ಬೀಳುತ್ತಾರೆ" ಎಂದು ವಿಶ್ಲೇಷಿಸಿದರು.
"ಬಿಜೆಪಿ ಪ್ರತಿಯೊಂದನ್ನೂ ವಶಪಡಿಸಿಕೊಳ್ಳಲು ಬಯಸಿದೆ. ಇಂಥ ಜನರನ್ನು ಸೆಳೆಯಲು ಬೆದರಿಕೆಯನ್ನೂ ಹಾಕುತ್ತಿದೆ. ಕೆಲ ಪ್ರಕರಣಗಳಲ್ಲಿ ಅವರು ಯಶಸ್ವಿಯಾಗಬಹುದು. ಆದರೆ ಆರೆಸ್ಸೆಸ್ನ ನಿಜ ಸ್ವರೂಪವನ್ನು ತಿಳಿದಿರುವ ಸಾಮಾನ್ಯ ಜನರು ಅವರನ್ನು ಒಪ್ಪಿಕೊಳ್ಳುವುದಿಲ್ಲ" ಎಂದರು.