ನ್ಯಾಯಾಲಯದ ಆವರಣದಲ್ಲಿಯೇ ಪತ್ನಿ ಮೇಲೆ ಪತಿಯಿಂದ ಆ್ಯಸಿಡ್ ದಾಳಿ

ಕೊಯಂಬತ್ತೂರು: ವ್ಯಕ್ತಿಯೊಬ್ಬ ತನ್ನ ಪತ್ನಿ ಮೇಲೆ ಆ್ಯಸಿಡ್ (acid) ದಾಳಿ ನಡೆಸಿದ ಆಘಾತಕಾರಿ ಘಟನೆ ತಮಿಳುನಾಡಿನ (Tamil Nadu) ಕೊಯಂಬತ್ತೂರಿನ ಕೋವೈ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ನಡೆದಿದೆ.
ಶಿವಕುಮಾರ್ ಎಂಬಾತ ತನ್ನ ಪತ್ನಿ ಕವಿತಾಳ ಮೇಲೆ ನಡೆಸಿದ ಈ ಆ್ಯಸಿಡ್ ದಾಳಿಯಿಂದ ಆಕೆಯ ಮೈ ತುಂಬಾ ಸುಟ್ಟ ಗಾಯಗಳಾಗಿವೆ. ನ್ಯಾಯಾಲಯದಲ್ಲಿದ್ದ ವಕೀಲರು ತಕ್ಷಣ ಕವಿತಾರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು ಎಂದು ವರದಿಯಾಗಿದೆ.
ಆರೋಪಿ ಶಿವಕುಮಾರ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದರೂ ವಕೀಲರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಇದ್ದುದರಿಂದ ಕವಿತಾ ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯದಲ್ಲಿ ಆಕೆಯ ಪಕ್ಕದಲ್ಲಿಯೇ ಕುಳಿತಿದ್ದ ಆಕೆಯ ಗಂಡ ಶಿವಕುಮಾರ್ ಬಾಟಲಿಯಲ್ಲಿ ತಂದಿದ್ದ ಆ್ಯಸಿಡ್ ಅನ್ನು ಪತ್ನಿಯತ್ತ ಎರಚಿದ್ದಾನೆ.
ಕವಿತಾಗೆ ಶೇ. 80 ರಷ್ಟು ಸುಟ್ಟ ಗಾಯಗಳುಂಟಾಗಿವೆ ಎಂದು ಪೊಲೀಸರು ತಿಳಿಸಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿಯಿದೆ.
ದಂಪತಿ ನಡುವಿನ ವಿವಾದದಿಂದ ಈ ಘಟನೆ ನಡೆದಿದೆ. ಈ ಘಟನೆ ನಂತರ ಕೋರ್ಟ್ ಆವರಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಆತ ನೀರಿನ ಬಾಟಲಿಯಲ್ಲಿ ಆ್ಯಸಿಡ್ ತಂದಿದ್ದರಿಂದ ಯಾರಿಗೂ ಮೊದಲು ಸಂಶಯ ಬಂದಿರಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅದಾನಿ ಸಮೂಹದಲ್ಲಿ ಬಿರುಗಾಳಿ ಎಬ್ಬಿಸಿದ ಬಳಿಕ ಶೀಘ್ರದಲ್ಲಿ ಮತ್ತೊಂದು ವರದಿ ಪ್ರಕಟಿಸುವುದಾಗಿ ಹೇಳಿದ ಹಿಂಡೆನ್ ಬರ್ಗ್







