ಮಡಿಕೇರಿ: ಅಗ್ನಿ ಆಕಸ್ಮಿಕ; ಸುಟ್ಟು ಕರಕಲಾದ ಲಾರಿ
ಮಡಿಕೇರಿ ಮಾ.23 : ಅನುಪಯುಕ್ತ ರಾಸಾಯನಿಕದ ಸರಕುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಅಗ್ನಿ ಆಕಸ್ಮಿಕದಿಂದ ಸುಟ್ಟು ಕರಕಲಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕೊಯಮತ್ತೂರಿನಿಂದ ಮಂಗಳೂರಿನ ಬೈಕಂಪಾಡಿಗೆ ತೆರಳುತ್ತಿದ್ದ ಲಾರಿ ಬುಧವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿದೆ. ಲಾರಿಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಚಾಲಕ ತಕ್ಷಣ ಕುಶಾಲನಗರದ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಲಾರಿಯಲ್ಲಿದ್ದ ದಾಖಲೆಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೊರಬಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ತಕ್ಷಣ ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ತಂಡಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಬೆಂಕಿ ರಾಸಾಯನಿಕ ವಸ್ತುಗಳಿಗೆ ತಗುಲಿ ಅಪಾಯಕಾರಿ ಪರಿಸ್ಥಿತಿ ಸೃಷ್ಟಿಯಾಯಿತು.
ಸ್ಥಳೀಯ ಅಧಿಕಾರಿಗಳ ಕೋರಿಕೆ ಮೇರೆಗೆ ಪಿರಿಯಾಪಟ್ಟಣ ಭಾಗದಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳ ತಂಡ ಬೆಂಕಿ ಶಮನಗೊಳಿಸಲು ಪ್ರಯತ್ನಿಸಿದರು. ಮುಂಜಾನೆ 5 ಗಂಟೆಯವರೆಗೆ ಎರಡು ಅಗ್ನಿಶಾಮಕ ವಾಹನಗಳ ಸಹಕಾರದಿಂದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಪೊಲೀಸರು ಸ್ಥಳದಲ್ಲಿದ್ದು ಹೆದ್ದಾರಿ ವಾಹನ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟರು.
ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದು, ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೋಟೋ :: ಲಾರಿ