ಕಾರ್ಖಾನೆ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕಾರ್ಮಿಕ ಸಂಘಟನೆಗಳ ಒತ್ತಾಯ

ಬೆಂಗಳೂರು, ಮಾ.23: ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ-2023ನ್ನು ವಿರೋಧಿಸಿ ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕೈಗಾರಿಕಾ ಮುಷ್ಕರ ನಡೆಸಿದ ಕಾರ್ಮಿಕ ಸಂಘಟನೆಗಳು ಕಾಯ್ದೆಯ ತಿದ್ದುಪಡಿ ವಾಪಸ್ ಪಡೆಯುವಂತೆ ಒತ್ತಾಯಿಸಲಾಯಿತು.
ಈ ಕುರಿತು ಮಾತನಾಡಿದ ಎಐಟಿಯುಸಿ ರಾಜ್ಯ ಸಮಿತಿ ಸದಸ್ಯೆ ಮೈತ್ರೇಯಿ, ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿ ಗರಿಷ್ಠ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಹಾಗೂ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಯದಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ 1948ಕ್ಕೆ ತಿದ್ದುಪಡಿ ತಂದು ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023ನ್ನು ರಾಜ್ಯ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಮಾಡಿದ್ದು, ಇದು ಕಾರ್ಮಿಕ ವಿರೋಧಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1948ರ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಶೋಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಹಿಂದೆ ಬೆಳಿಗ್ಗೆ ಕೆಲಸಕ್ಕೆ ಹೋದವರು ರಾತ್ರಿಯಾದ ಮೇಲೆ ಮನೆಗೆ ಬರುತ್ತಿದ್ದರು. ಕಾರ್ಮಿಕರು ನಿತ್ಯವೂ ಸೂರ್ಯನ ಬೆಳಕು ಸಹ ನೋಡದೇ ಕೆಲಸ ಮಾಡುತ್ತಿದ್ದರು. ಆ ವ್ಯವಸ್ಥೆಯ ವಿರುದ್ಧ ಹೋರಾಟದ ಪರಿಣಾಮ ಕಾಯ್ದೆ ಜಾರಿಗೆ ಬಂದಿದೆ. ಈಗ ಅದೇ ಕಾಯ್ದೆಗೆ ತಿದ್ದುಪಡಿ ತಂದು ಮತ್ತೆ ಕಾರ್ಮಿಕರನ್ನು ಹಗಲು, ರಾತ್ರಿ ದುಡಿಸಿಕೊಳ್ಳುವ ಹುನ್ನಾರ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ದುಡಿಯುವ ಮಹಿಳೆಯರ ಸುರಕ್ಷತೆ, ಕೆಲಸದ ಭದ್ರತೆ, ಸಾರಿಗೆ ಸೇವಾ ಸೌಲಭ್ಯಗಳಿಂದ ಮಹಿಳಾ ಕಾರ್ಮಿಕರು ವಂಚಿತರಾಗಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಕಿರುಕುಳ ಹೆಚ್ಚಾಗಿದೆ. ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತದೆ. ಕೆಲಸದ ಅಭದ್ರತೆಯಿಂದಾಗಿ ಉದ್ಯೋಗದಿಂಚ ವಂಚಿತರಾಗುತ್ತಿದ್ದಾರೆ. ಹೀಗಾಗಿ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳೆಯದಲ್ಲಿ ದುಡಿಸಿಕೊಳ್ಳುತ್ತಿರುವುದು ಕಾರ್ಖಾನೆ ಮಾಲಿಕರಿಗೆ ಅನುವುಗೊಳಿಸಿ ತಿದ್ದುಪಡಿ ಮಾಡಿರುವುದು, ಮಹಿಳಾ ಕಾರ್ಮಿಕರನ್ನು ದುಡಿಮೆಯಿಂದ ಹೊರಗಿಡುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದರು.
ಕಾರ್ಖಾನೆಗಳಲ್ಲಿ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಗೆ, ಕಾರ್ಮಿಕರ ಮೇಲೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡಗಳನ್ನು ಕಡಿಮೆ ಮಾಡಲು, ಕಾರ್ಮಿಕರ ಜೀವನವನ್ನು ಉತ್ತಮಪಡಿಸಲು ವಾರಕ್ಕೆ ಐದು ದಿನ ಕೆಲಸ, ದಿನಕ್ಕೆ ಏಳು ಗಂಟೆ ವಾರಕ್ಕೆ 35 ಗಂಟೆ ಕೆಲಸದ ಅವಧಿ ನಿಗದಿಪಡಿಸಿ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಮುಷ್ಕರದಲ್ಲಿ ಸಿಐಟಿಯು, ಎಐಟಿಯುಸಿ ಮತ್ತು ಐಎನ್‍ಟಿಯುಸಿ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.






.jpg)
.jpg)

