'ಉರಿಗೌಡ ನಂಜೇಗೌಡ' ಬಿಟ್ಟು ಬಿಡಿ, ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ: ಶೋಭಾ ಕರಂದ್ಲಾಜೆಗೆ ಪುಷ್ಪಾ ಅಮರನಾಥ್
ಮೈಸೂರು,ಮಾ.23: ಗ್ಯಾಸ್, ಪೆಟ್ರೋಲ್, ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲು ಆಗದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉರಿಗೌಡ, ನಂಜೇಗೌಡರ ವಿಷಯ ಮುಂದಿಟ್ಟುಕೊಂಡು ಮಾತನಾಡುತ್ತಿರುವುದು ನಾಚಿಕೆಗೇಡು ಎಂದು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಶೋಭಕ್ಕ ನಿಮಗೆ ನಿಜವಾಗಲೂ ಮಾನ ಮರ್ಯಾದೆ ಇದ್ದರೆ ಜನರ ಸಂಕಷ್ಟಗಳ ಬಗ್ಗೆ ಮಾತನಾಡಿ. ಅದು ಬಿಟ್ಟು, ಉರಿಗೌಡ ನಂಜೇಗೌಡ ವಿಚಾರವನ್ನು ಮಾತನಾಡಿ ಭಾವನಾತ್ಮಕವಾಗಿ ಮತಗಳಿಸಲು ಪ್ರಯತ್ನಪಡಬೇಡಿ. ಇದು ಹೆಚ್ಚು ದಿನ ನಡೆಯುವುದಿಲ್ಲ'' ಎಂದು ಹರಿಹಾಯ್ದರು.
''ಬಿಜೆಪಿಯವರಿಗೆ ಅಭಿವೃದ್ಧಿ ಮೇಲೆ ಮತ ಕೇಳಲು ಆಗುವುದಿಲ್ಲ. ಹಾಗಾಗಿ ಅವರು ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಮತ ಕೇಳಲು ಮುಂದಾಗಿದ್ದಾರೆ. ತಮ್ಮ 40% ಕಮೀಷನ್ ದುಡ್ಡನ್ನು ಖರ್ಚು ಮಾಡಿ ಮತ ಸೆಳೆಯಲು ಮುಂದಾಗಿದ್ದಾರೆ. ಆದರೆ ಈ ಬಾರಿ ಅದ್ಯಾವುದೂ ನಡೆಯುವುದಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ'' ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪುಷ್ಪವಲ್ಲ, ಮೈಸೂರು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮೈಸೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ಧಶೆಟ್ಟಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಚುನಾವಣೆಯ ಕಾಲವಿದು ಎಚ್ಚರ..!: 'ಉರಿಗೌಡ, ನಂಜೇಗೌಡ' ಬಗ್ಗೆ ನಟ ಕಿಶೋರ್ ಎಚ್ಚರಿಕೆಯ ಸಂದೇಶ
'ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಅಧಿಕಾರ ನೀಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಅಧಿನಾಯಕಿ, ಅಂದಿನ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ 2005 ರಲ್ಲಿ ಮಹಿಳೆಯರಿಗೆ ಶೆ.50 ರಷ್ಟು ಮೀಸಲಾತಿ ಜಾರಿಮಾಡಿದರು. ಸಂಸತ್, ವಿಧಾನಸಭೆಗಳಲ್ಲೂ ಮಹಿಳಾ ಮೀಸಲಾತಿ ಅಗತ್ಯವಿದೆ. ಇದರನ್ನು ಜಾರಿಗೊಳಿಸಬೇಕು ಎಂಬ ಇಚ್ಚಾ ಶಕ್ತಿ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ'.
-ಡಾ.ಪುಷ್ಪಾ ಅಮರನಾಥ್