ರಾಜ್ಯದಲ್ಲಿ ಶೀಘ್ರದಲ್ಲೇ ಫಿಲ್ಮ್ ಸಿಟಿ ನಿರ್ಮಾಣ: ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ
14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಸಿಎಂ
ಬೆಂಗಳೂರು, ಮಾ.23: ಸಿನೆಮಾ ರಂಗಕ್ಕೆ ಯಾವ ರೀತಿಯ ಸಹಾಯವಾಗಬೇಕು ಅದನ್ನು ಸರಕಾರ ಮಾಡಲು ಸಿದ್ಧವಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ರೀತಿಯಲ್ಲಿ ರಾಜ್ಯದಲ್ಲಿ ಶೀಘ್ರದಲ್ಲೇ ಫಿಲ್ಮ್ ಸಿಟಿ ಸಹ ನಿರ್ಮಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧದ ಬಳಿ ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರ್ಮಿಸುವ ಫಿಲ್ಮ್ ಸಿಟಿಗೆ ಬಾಲಿವುಡ್ ಅಷ್ಟೇ ಅಲ್ಲ ಹಾಲಿವುಡ್‍ನವರು ಕೂಡ ಬಂದು ಸಿನಿಮಾ ಮಾಡುವಂತಾಗಬೇಕು ಎಂದರು.
ನಮ್ಮ ನಾಡಿನ ಕೆಜಿಎಫ್, ಕಾಂತಾರ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಆ ಸಿನಿಮಾ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಆರ್‍ಆರ್‍ಆರ್ ಸಿನಿಮಾ ಆಸ್ಕರ್ ಪ್ರಶಸ್ತಿ ಗಳಿಸುವ ಮೂಲಕ ದೇಶಕ್ಕೆ ಹಿರಿಮೆಯನ್ನು ತಂದುಕೊಟ್ಟಿದೆ. ಒಟ್ಟಾರೆ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬೆಂಗಳೂರು ಪ್ರೋತ್ಸಾಹಿಸಲಿದೆ. ಈ ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡಿದ ಸಿನಿಮಾಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮನೋರಂಜನೆ ಕ್ಷೇತ್ರದ ಬಹುಪಾಲು ಆವರಿಸಿಕೊಂಡಿರುವ ಸಿನಿಮಾಗೆ ಬಹಳ ದೊಡ್ಡ ಇತಿಹಾಸವಿದೆ. ಇಂದಿನ ಡಿಜಿಟಲೈಜೆಷನ್‍ನಿಂದ ಸಿನಿಮಾ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ನಾವು ಸಿನಿಮಾ ನೋಡಿದಕ್ಕೂ ನಮ್ಮ ಮಕ್ಕಳು ಸಿನಿಮಾ ನೋಡುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಸಿನಿಮಾ ಕ್ಷೇತ್ರ ಸಾಕಷ್ಟು ಬೇಗ ತಂತ್ರಜ್ಞಾನದಿಂದ ಬದಲಾವಣೆ ಕಂಡಿದೆ. ಕನ್ನಡ ಸಿನಿಮಾ ರಂಗ ತಂತ್ರಜ್ಞಾನ, ಕಥೆ ಸೇರಿದಂತೆ ಎಲ್ಲದರಲ್ಲೂ ಹೆಸರು ಮಾಡಿದೆ ಎಂದರು.
ಇಡೀ ಜಗತ್ತಿನಲ್ಲಿ ಅತ್ಯಂತ ಕಡಿಮೆ ನಗರದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತದೆ. ಅದರಲ್ಲಿ ನಮ್ಮ ಬೆಂಗಳೂರು ನಗರ ಸಹ ಇರುವುದು ಹೆಮ್ಮೆಯಾಗಿದೆ. ಬೆಂಗಳೂರು ಒಂದು ಅಂತರಾಷ್ಟ್ರೀಯ ನಗರವಾಗಿದ್ದು, ಪ್ರತಿದಿನ 5 ಸಾವಿರಕ್ಕಿಂತ ಹೆಚ್ಚು ಜನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಹೋಗುತ್ತಿದ್ದಾರೆ. ಐಟಿ ಬಿಟಿ ಕ್ಯಾಪಿಟಲ್ ಇದೆ ಬರುವಂತ ದಿನಗಳಲ್ಲಿ ಫೈನಾನ್ಸಿಯಲ್ ಸಿಟಿಯಾಗಲಿದೆ ಎಂದು ಹೇಳಿದರು.