ಬಹುಪತ್ನಿತ್ವ, ನಿಖಾ ಹಲಾಲಾ ಕುರಿತ ಪಿಐಎಲ್ ಆಲಿಕೆಗೆ ಹೊಸ ನ್ಯಾಯಪೀಠ ರಚನೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಮಾ.23: ಮುಸ್ಲಿಂ ಸಮುದಾಯದಲ್ಲಿನ ಬಹುಪತ್ನಿತ್ವ ಹಾಗೂ ‘ನಿಖಾ ಹಲಾಲಾ’ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಆಲಿಕೆಗೆ ಐವರು ನ್ಯಾಯಾಧೀಶರ ನೂತನ ಸಾಂವಿಧಾನಿಕ ಪೀಠವೊಂದನ್ನು ‘ಸಮರ್ಪಕವಾದ ಹಂತ’ದಲ್ಲಿ ರಚಿಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ.
ಬಹುಪತ್ನಿತ್ವ ಹಾಗೂ ನಿಖಾ ಹಲಾಲಾಗೆ ಅವಕಾಶ ನೀಡುವ ಭಾರತೀಯ ದಂಡ ಸಂಹಿತೆಯ 494ನೇ ಸೆಕ್ಷನ್ ಅನ್ನು ರದ್ದುಪಡಿಸಬೇಕೆದಂಂದು ಆಗ್ರಹಿಸಿ ನ್ಯಾಯವಾದಿ ಆಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಆಲಿಕೆ ನಡೆಸಿದ ಸಂದರ್ಭ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ ಈ ವಿಷಯ ತಿಳಿಸಿದೆ.
‘‘ನಾನದನ್ನು ಸೂಕ್ತ ಹಂತದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವೆ ಹಾಗೂ ಸಾಂವಿಧಾನಿಕ ಪೀಠವೊಂದನ್ನು ರಚಿಸಿವೆ’’ ಎಂದು ಸಿಜೆಐ ತಿಳಿಸಿದರು.
ಬಹುಪತ್ನಿತ್ವ ಹಾಗೂ ನಿಖಾ ಹಲಾಲಾದ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್ ಗುಪ್ತಾ, ಸೂರ್ಯ ಕಾಂತ್, ಎಂ.ಎಂ.ಸುಂದರೇಶ್ ಹಾಗೂ ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವನ್ನು ರಚಿಸಲಾಗಿತ್ತು. ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್ಎಚ್ಆರ್ಸಿ), ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲು) ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (ಎನ್ಸಿಎಂ)ವನ್ನು ಕಕ್ಷಿದಾರರನ್ನಾಗಿಸಿತ್ತು ಹಾಗೂ ಅವರ ಅಭಿಪ್ರಾಯವನ್ನು ಕೋರಿತ್ತು.
ಈ ನ್ಯಾಯಪೀಠದ ಸದಸ್ಯರಾದ ನ್ಯಾಯಮೂರ್ತಿ ಬ್ಯಾನರ್ಜಿ ಹಾಗೂ ಗುಪ್ತಾ ಅವರು ಕಳೆದ ವರ್ಷದ ಸೆಪ್ಟೆಂಬರ್ 23 ಹಾಗೂ ಆಕ್ಟೋಬರ್ 6ರಂದು ನಿವೃತ್ತರಾಗಿದ್ದರಿಂದ ಐವರು ಸದಸ್ಯರ ಸಾಂವಿಧಾನಿಕ ಪೀಠದ ಪುನಾರಚನೆಯಾಗಬೇಕಾಗಿದೆ.
ಬಹುಪತ್ನಿತ್ವ ಹಾಗೂ ನಿಖಾ ಹಲಾಲಾ ಅಸಂವಿಧಾನಿಕ ಹಾಗೂ ಅಕ್ರಮವೆಂದು ಘೋಷಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕೆಂದು ಅಶ್ವಿನಿ ಉಪಾಧ್ಯಾಯ ಪಿಐಎಲ್ ನಲ್ಲಿ ಕೋರಿದ್ದರು.