"ಸಂಘಪರಿವಾರದ ಒತ್ತಡಕ್ಕೆ ಮುಲ್ಕಿ ಪೊಲೀಸರು ಸಾಕುತ್ತಿದ್ದ ದನ, ಕರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ"
ಸಂತ್ರಸ್ತ ಸಂಶುದ್ದೀನ್ ಆರೋಪ
ಮಂಗಳೂರು, ಮಾ.23: ಮನೆಯಲ್ಲಿ ಸಾಕುತ್ತಿದ್ದ ದನಗಳು ಹಾಗೂ ಅವುಗಳ ಕರುಗಳನ್ನು ಸಂಘಪರಿವಾರದವರ ಒತ್ತಡಕ್ಕೆ ಮಣಿದು ಮುಲ್ಕಿ ಪೊಲೀಸರು ವಶಕ್ಕೆ ಪಡೆದು ವಿನಾಕಾರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದನಗಳ ಮಾಲಕ ಹಾಗೂ ಸಂತ್ರಸ್ತ ಸಂಶುದ್ದೀನ್ ಆರೋಪಿಸಿದ್ದಾರೆ.
ಬುಧವಾರ ಕೆಲವು ದನಗಳನ್ನು ಮೇಯಲು ಬಿಡಲಾಗಿತ್ತು. ಕೆಲವು ದನಗಳನ್ನು ಹಟ್ಟಿಯಲ್ಲಿ ಕಟ್ಟಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಸಂಘಪರಿವಾರದ ಕಾರ್ಯಕರ್ತರು ಹಬ್ಬಕ್ಕೆ ಕಡಿಯುವ ಸಲುವಾಗಿ ದನಗಳನ್ನು ಅಕ್ರಮವಾಗಿ ಸಾಕಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ದನಗಳನ್ನು ಕಟ್ಟಲಾಗಿದ್ದ ಹಟ್ಟಿಗೆ ನುಗ್ಗಿ ಅಲ್ಲಿದ್ದ ದನಗಳನ್ನು ಹೊರಗಡೆ ತಂದು ಕಟ್ಟಿದ್ದಾರೆ. ಅಲ್ಲದೆ, ಮನೆಯ ಸಮೀಪದಲ್ಲಿ ಮೇಯುತ್ತಿದ್ದ ದನಗಳನ್ನೂ ಎಳೆದು ತಂದು ಒಂದೆಡೆ ಕೂಡಿ ಹಾಕಿ ಫೋಟೊ, ವೀಡಿಯೊ ಮಾಡಿಕೊಂಡು "ಗೋ ಕಳ್ಳರ ವಿರುದ್ಧ ಮತ್ತೆ ಸಿಡಿದೆದ್ದ ಬಜರಂಗಿಗಳು, 20 ಗೋವುಗಳ ರಕ್ಷಣೆ ಮತ್ತು ಆರೋಪಿಯ ಬಂಧನ" ಎಂಬ ತಲೆ ಬರಹದಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಸಂಘಪರಿವಾರದ ಕಾರ್ಯಕರ್ತರು ದಾಳಿ ಮಾಡಿ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ನೈಜ ಸಂಗತಿ ತಿಳಿದಿದ್ದರೂ, ಸಂಘ ಪರಿವಾರದ ಒತ್ತಡಕ್ಕೆ ಮಣಿದು ದನಗಳನ್ನು ವಶಕ್ಕೆ ಪಡೆದು ನನ್ನ ಮೇಲೆ ವಿನಾಃ ಕಾರಣ ಪ್ರಕರಣ ದಾಖಲಿಸಿಕೊಂಡು ದನಗಳು ಹಾಗೂ ಅವುಗಳ ಕರುಗಳನ್ನು ಗೋಶಾಲೆಗೆಂದು ಕೊಂಡು ಹೋಗಿದ್ದಾರೆ. ನನ್ನ ಬಳಿ ಇದ್ದ 8 ದನಗಳು ಹಾಲು ನೀಡುತ್ತಿದ್ದು, ಅವುಗಳ ಹಾಲನ್ನು ನನ್ನ ನೆರೆಹೊರೆಯ ಸುಮಾರು 20 ಮನೆಗಳಿಗೆ ನೀಡಿ ಉಳಿದ ಹಾಲನ್ನು ಡೈರಿಗೆ ನೀಡುತ್ತಿದ್ದೆವು. ಆದರೆ, ಸಂಘಪರಿವಾರದ ಕಾರ್ಯಕರ್ತರು ವಿನಾಕಾರಣ ಗೋವು ಕಳ್ಳರೆಂದು ಆರೋಪ ಹೊರಿಸಿ ನನ್ನ ಮನೆಯಲ್ಲಿದ್ದ ದನಗಳನ್ನು ಅವರ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಸಂಶುದ್ದೀನ್ ಆರೋಪಿಸಿದ್ದಾರೆ.
ಮುಲ್ಕಿ ರಾಜೇಶ್ ಶೆಟ್ಟಿ ಎಂಬವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಮುಲ್ಕಿ ಪೊಲೀಸರು ಒಟ್ಟು 19 ದನಗಳು ಹಾಗೂ ಸಂಶುದ್ದೀನ್ ಎಂಬವರನ್ನು ಬಂಧಿಸಿದ್ದರು. ಬಳಿಕ ಸಂಶುದ್ದೀನ್ ಅವರಿಗೆ ಪೊಲೀಸ್ ಠಾಣೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಂಘಪರಿವಾರದವರು ಸಂಶಯಿಸುತ್ತಾರೆಂದು ಮುಸಲ್ಮಾನರು ದನ, ಕರು ಸಾಕುವಂತಿಲ್ಲವೇ?
ಅವರು ಯಾರೋ ನಮ್ಮ ಹಟ್ಟಿಗೆ ದಾಳಿ ಮಾಡಿ ನಾವು ಸಾಕುತ್ತಿದ್ದ ದನಗಳನ್ನು ಕೊಂಡುಹೋಗುತ್ತಾರೆ. ಅವರಿಗೆ ಸಂಶಯದಿಂದ ಪೊಲೀಸರಿಗೆ ದೂರು ನೀಡಿದ್ದಾರಂತೆ. ಅದಕ್ಕಾಗಿ ನಮ್ಮ ದನ ಕರುಗಳನ್ನು ಪೊಲೀಸರು ವಶಕ್ಕೆ ಪಡೆದು ಗೋಶಾಲೆಗೆ ಸಾಗಿಸಿದ್ದಾರಂತೆ. ಹಾಗಾದರೆ ಸಂಘಪರಿವಾರದವರು ಸಂಶಯಿಸುತ್ತಾರೆ ಎಂದು ಮುಸಲ್ಮಾನರು ಮನೆಗಳಲ್ಲಿ ದನ, ಕರುಗಳನ್ನು ಸಾಕುವಂತಿಲ್ಲವೇ? ಹೆರಿಗೆ ನೋವಿನಿಂದ ಬಳಲುತ್ತಿದ್ದ ಒಂದು ದನವನ್ನೂ ಬಿಡದೆ ಎಲ್ಲವನ್ನೂ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿತ್ತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ದನಕ್ಕೆ ಪೊಲೀಸ್ ಠಾಣೆಯಲ್ಲೇ ಹೆರಿಗೆಯಾಗಿದೆ. ನಾವು ದನಗಳನ್ನು ಕಡಿಯಲು ತಂದಿರುವುದಲ್ಲ. ನಾವು ಮಾಂಸದ ವ್ಯಾಪಾರವನ್ನೂ ಮಾಡುತ್ತಿಲ್ಲ. ನಮ್ಮ ಮನೆಯ ದನ, ಕರುಗಳು ನಮಗೆ ಬೇಕು ಎಂದು ಸಂತ್ರಸ್ತ ಸಂಶುದ್ದೀನ್ ಅವರ ಮಗ ಮುಹಮ್ಮದ್ ಶಾನ್ ಹೇಳಿದ್ದಾರೆ.
"ದನಗಳನ್ನು ಎಲ್ಲೆಂದರಲ್ಲಿ ಕಟ್ಟಿ ಹಾಕಲಾಗಿದ್ದು, ಹಬ್ಬಕ್ಕೆ ಮಾಂಸ ಮಾಡುವ ಉದ್ದೇಶದಿಂದ ದನಗಳನ್ನು ಕಟ್ಟಿ ಹಾಕಲಾಗಿದೆ ಎಂದು ಮುಲ್ಕಿಯ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ತನಿಖೆ ನಡೆಯುತ್ತಿದೆ"
-ಕುಸುಮಾದರ, ಮುಲ್ಕಿ ಪೊಲೀಸ್ ನಿರೀಕ್ಷಕರು