ಇನ್ನಷ್ಟು ಬಾರಿ ಜೈಲಿಗೆ ಹಾಕಿದರೂ ಹೆದರಲ್ಲ...: ಜೈಲಿನಿಂದ ಬಿಡುಗಡೆಗೊಂಡ ನಟ ಚೇತನ್ ಅಹಿಂಸಾ
ಬೆಂಗಳೂರು, ಮಾ.23: ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಅಹಿಂಸಾ ಅವರು ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಬಿಡುಗಡೆಗೊಂಡ ಬಳಿಕ ಪರಪ್ಪನ ಅಗ್ರಹಾರ ಬಳಿ ಮಾತನಾಡಿದ ಅವರು, 'ಕಳೆದ ಬಾರಿ ಟ್ವೀಟ್ ಮಾಡಿದ್ದಕ್ಕೆ ಏಳು ದಿನ ಜೈಲಿಗೆ ಹಾಕಿದ್ದರು. ಈ ಬಾರಿ ಟ್ವೀಟ್ ಮಾಡಿದಕ್ಕೆ ಮೂರು ದಿನ ಬಂಧನ ಮಾಡಿದ್ದಾರೆ. ಹಿಂದುತ್ವ ಅನ್ನೋದು ಯಾವುದು ಇಲ್ಲ. ಲಿಂಗಾಯುತ ಪ್ರತ್ಯೇಕ ಧರ್ಮ ಕೇಳಿದಂತೆ ಹಿಂದುತ್ವವನ್ನು ಕೇಳಿ. ನಾವು ನಿಮ್ಮ ಜೊತೆಗೆ ನಿಲ್ಲುತ್ತೇವೆ. ಆದರೆ ಹಿಂದುತ್ವವನ್ನು ಬೇರೆ ರೀತಿ ಬಿಂಬಿಸಲಾಗುತ್ತಿದೆ. ಈಗಲೂ ನಾನು ಹೇಳುತ್ತೇನೆ ಇದನ್ನು ಒಪ್ಪಲು ಸಾಧ್ಯ ಇಲ್ಲ. ಇನ್ನಷ್ಟು ಬಾರಿ ಬಂಧಿಸಿದರೂ ನಾನು ಹೆದರುವುದಿಲ್ಲ. ಹೋರಾಟಗಾರನಿಗೆ ಸೆರೆಮನೆಯೂ ಅರಮನೆಯೇ' ಎಂದು ಹೇಳಿದರು
ನಟ ಚೇತನ್ ಕುಮಾರ್ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 32ನೇ ಎಸಿಎಂಎಂ ನ್ಯಾಯಾಧೀಶೆ ಜೆ.ಲತಾ ಅವರು 25 ಸಾವಿರ ರೂ. ವೈಯಕ್ತಿಕ ಬಾಂಡ್ ಅಥವಾ ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ನೀಡಲು ಆದೇಶಿಸಿದ್ದಾರೆ. ಅಲ್ಲದೇ, ತನಿಖೆಗೆ ಸಹಕರಿಸುವಂತೆ ನಿರ್ದೇಶಿಸಿದ್ದಾರೆ.