ಹದಿಹರೆಯದವರು ಪ್ರೇಮ ವೈಫಲ್ಯದಿಂದ ಚೇತರಿಸಿಕೊಳ್ಳಲು 40 ಲಕ್ಷ ಡಾಲರ್ ವೆಚ್ಚ ಮಾಡಲಿರುವ ನ್ಯೂಝಿಲ್ಯಾಂಡ್

ಆಕ್ಲೆಂಡ್: ಪ್ರೇಮ ವೈಫಲ್ಯದಿಂದ ಕುಗ್ಗಿರುವ ಹದಿಹರೆಯದವರಿಗೆ ನೆರವು ನೀಡಲು 'Love Better' ಎಂಬ ಅಭಿಯಾನವನ್ನು ಕೈಗೆತ್ತಿಕೊಂಡಿರುವ ನ್ಯೂಝಿಲ್ಯಾಂಡ್ ಸರ್ಕಾರವು, ಅವರಲ್ಲಿ ಆರೋಗ್ಯಕರ ಗಡಿ ಹಾಗೂ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುವ ಪ್ರಯತ್ನ ನಡೆಸಿದೆ ಎಂದು hindustantimes.com ವರದಿ ಮಾಡಿದೆ.
ಬುಧವಾರ "ನಾವು ಪ್ರೇಮ ವೈಫಲ್ಯ ಅನುಭವಿಸಿದ ಹೃದಯಗಳನ್ನು ಬಲ್ಲೆವು" ಎಂಬ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನ್ಯೂಝಿಲ್ಯಾಂಡ್ ಸರ್ಕಾರ, 'Love Better' ಎಂಬ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈ ಉಪಕ್ರಮವನ್ನು ನ್ಯೂಝಿಲ್ಯಾಂಡ್ ಸರ್ಕಾರವು ದೇಶದಲ್ಲಿನ ಕೌಟುಂಬಿಕ ಬಾಂಧವ್ಯಕ್ಕೆ ಧಕ್ಕೆಯಾಗುವುದನ್ನು ತಡೆದು, ಪ್ರೇಮ ವೈಫಲ್ಯ ಅನುಭವಿಸಿದ ಯುವ ಜನಾಂಗದಲ್ಲಿ ಜೀವನಪರ್ಯಂತ ಜೀವಿಸುವ ದೃಷ್ಟಿಕೋನವನ್ನು ಬೆಳೆಸುವ ಉದ್ದೇಶ ಹೊಂದಿದೆ.
ಮೂರು ವರ್ಷಗಳ ಅವಧಿಗೆ 40 ಲಕ್ಷ ಡಾಲರ್ ವೆಚ್ಚವನ್ನು ಮಾಡಲು ಯೋಜಿಸಲಾಗಿದ್ದು, ಈ ಅಭಿಯಾನವನ್ನು ದೇಶದ ಸಾಮಾಜಿಕ ಅಭಿವೃದ್ಧಿ ಸಚಿವಾಲಯ ನಡೆಸಲಿದೆ. "ಈ ಉಪಕ್ರಮವು ಯುವಕರು ಭವಿಷ್ಯದ ಬಾಂಧವ್ಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಅಧಾರದಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡಿ, ವ್ಯವಸ್ಥಿತ ಅನುಭವದ ಮೂಲಕ ನೆರವು ಒದಗಿಸಲಿದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಅಭಿಯಾನದ ಮೂಲದ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಸಹ ಸಚಿವ ಪ್ರಿಯಾಂಕಾ ರಾಧಾಕೃಷ್ಣ, "1200ಕ್ಕೂ ಹೆಚ್ಚು ಮಂದಿ ಪ್ರಾಥಮಿಕ ಪ್ರೇಮಾನುಭವ ಹಾಗೂ ಪ್ರೇಮ ವೈಫಲ್ಯಗಳನ್ನು ನಿಭಾಯಿಸಲು ನೆರವಿನ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದು, ಅವುಗಳನ್ನು ಸಾಮಾನ್ಯ ಸವಾಲು ಎಂದು ಗುರುತಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಕಾಂಗ್ರೆಸ್ ನಾಯಕಿ