ಚುನಾವಣೆ ಮುಗಿಯುವವರೆಗೆ 'ಸಂತೋಷ' ಆಟ ನಡೆಯುವುದಿಲ್ಲ ಅಲ್ಲವೇ?: ಸಿ.ಟಿ ರವಿ ಕಾಳೆಲೆದ ಕಾಂಗ್ರೆಸ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ ವೈ ವಿಜಯೇಂದ್ರ ಜೊತೆಗೆ ನಡೆದುಕೊಂಡ ಆಪ್ತತೆಯ ರೀತಿ, ನೀಡಿರುವ ಪ್ರಾಮುಖ್ಯತೆ ಬಗ್ಗೆ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೊಗಳು ಸಾಕಷ್ಟು ಹರಿದಾಡುತ್ತಿವೆ.
ಈ ಕುರಿತ ಫೋಟೊ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ವಿಪಕ್ಷ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಳೆಲೆದಿದೆ.
ಇತ್ತೀಚೆಗೆ ವಿಜಯೇಂದ್ರ ವಿರುದ್ಧ ಟಿಕೆಟ್ ವಿಚಾರವಾಗಿ ಸಿಟಿ ರವಿ ನೀಡಿದ್ದ ಹೇಳಿಕೆಯನ್ನು ಉ್ಲಲೇಖಿಸಿ 'ಚುನಾವಣೆ ಮುಗಿಯುವವರೆಗೆ ನಿಮ್ಮ 'ಸಂತೋಷ' ಆಟ ನಡೆಯುವುದಿಲ್ಲ ಅಲ್ಲವೇ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
"ನಮ್ಮ ಪಕ್ಷದ ಟಿಕೆಟ್ ಕಿಚನ್ ನಲ್ಲಿ ತೀರ್ಮಾನ ಆಗಲ್ಲ" ಅಂದಿದ್ರಲ್ಲ ಮಾನ್ಯ ಸಿ.ಟಿ ರವಿ ಅವರೇ, ಇದೇನಿದು ನಿಮ್ಮ ಹೇಳಿಕೆಗೆ ವಿರುದ್ಧವಾಗಿ ಆಗ್ತಾ ಇದೆಯಲ್ಲ. ವಿಜಯೇಂದ್ರ ಅವರಿಗೆ ಟಿಕೆಟ್ ಫಿಕ್ಸ್ ಆಯ್ತಾ? ಬಿ.ಎಸ್ ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್ ಅವರ ನಡುವಣ ಮೇಲಾಟದಲ್ಲಿ ಯಾರ ಕೈ ಮೇಲಾಯ್ತು? ಎಲೆಕ್ಷನ್ ಮುಗಿವವರೆಗೆ 'ಸಂತೋಷ' ಆಟ ನಡೆಯುವುದಿಲ್ಲ ಅಲ್ಲವೇ?'' ಎಂದು ಟ್ವೀಟಿಸಿದೆ.
ಸಿ.ಟಿ ರವಿ ನೀಡಿದ್ದ ಹೇಳಿಕೆ ಏನು?
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಿ.ಟಿ ರವಿ, ''ಟಿಕೆಟ್ ನೀಡುವ ಬಗ್ಗೆ ಕುಟುಂಬದಲ್ಲಿ ತೀರ್ಮಾನವಾಗುವುದಿಲ್ಲ, ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.ನಮ್ಮ ಪಕ್ಷದಲ್ಲಿ ಕಿಚನ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲ್ಲ. ನಾಯಕರ ಮಕ್ಕಳೆಂದ ಕಾರಣಕ್ಕೆ ಅವರಿಗೆ ಟಿಕೆಟ್ ಸಿಕ್ಕಲ್ಲ. ಈಗ ವಿಜಯೇಂದ್ರ ಬಗ್ಗೆ ಕೇಳಿದ್ದೀರಿ. ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ಸಮೀಕ್ಷೆಯ ಆಧಾರದ ಮೇಲೆ ಗೆಲ್ಲುವ ಮಾನದಂಡದ ಆಧರಿಸಿ ಟಿಕೆಟ್ ನೀಡುವ ಕುರಿತು ನಿರ್ಧರಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಸಮೀಕ್ಷೆ ನಡೆಯುವುದಿಲ್ಲ'' ಎಂದು ಹೇಳಿದ್ದರು.
ನಮ್ಮ ಪಕ್ಷದ ಟಿಕೆಟ್ ಕಿಚನ್ನಲ್ಲಿ ತೀರ್ಮಾನ ಆಗಲ್ಲ ಅಂದಿದ್ರಲ್ಲ ಮಾನ್ಯ @CTRavi_BJP ಅವರೇ
— Karnataka Congress (@INCKarnataka) March 24, 2023
ಇದೇನಿದು ನಿಮ್ಮ ಹೇಳಿಕೆಗೆ ವಿರುದ್ಧವಾಗಿ ಆಗ್ತಾ ಇದೆಯಲ್ಲ. ವಿಜಯೇಂದ್ರ ಅವರಿಗೆ ಟಿಕೆಟ್ ಫಿಕ್ಸ್ ಆಯ್ತಾ? ಯಡಿಯೂರಪ್ಪ ಮತ್ತು ಸಂತೋಷ್ ನಡುವಣ ಮೇಲಾಟದಲ್ಲಿ ಯಾರ ಕೈ ಮೇಲಾಯ್ತು?
ಎಲೆಕ್ಷನ್ ಮುಗಿವವರೆಗೆ 'ಸಂತೋಷ' ಆಟ ನಡೆಯುವುದಿಲ್ಲ ಅಲ್ಲವೇ? pic.twitter.com/IWohHOufbK