ಚುನಾವಣೆ ಹಿನ್ನೆಲೆ | ಅಹಿತಕರ ಘಟನೆಗಳಿಗೆ ವಲಯ ಆಯುಕ್ತರೇ ಜವಾಬ್ದಾರಿ: ಬಿಬಿಎಂಪಿ ಆದೇಶ

ಬೆಂಗಳೂರು, ಮಾ.24: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಬಿಎಂಪಿ ಕ್ರಮ ಜರುಗಿಸಲು ಮುಂದಾಗಿದ್ದು, ಅಹಿತಕರ ಘಟನೆಗಳಿಗೆ ಆಯಾ ವಲಯದ ಆಯುಕ್ತರೇ ಜವಾಬ್ದಾರರಾಗಿರುತ್ತಾರೆ ಎಂದು ಬಿಬಿಎಂಪಿ ಆದೇಶವನ್ನು ಹೊರಡಿಸಿದೆ.
ಚುನಾವಣೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲ ವಿಧಾನಸಭಾ ಕ್ಷೇತ್ರದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಈ ಕುರಿತು ಬಿಬಿಎಂಪಿಗೆ ಹಾಗೂ ಚುನಾವಣಾ ಆಯೋಗಕ್ಕೆ ದೂರುಗಳು ಬರುತ್ತಿವೆ. ಹಾಗಾಗಿ ಬಿಬಿಎಂಪಿ ಕಾಯ್ದೆ 2020 ಅನ್ನು ಕಟ್ಟುನಿಟ್ಟಾಗಿ ಅನುಷ್ಟಾನ ಮಾಡಲಾಗುತ್ತಿದೆ. ಈ ಕಾಯ್ದೆಯ ಅನ್ವಯ ವಲಯ ಆಯುಯಕ್ತರೇ ಅಹಿತಕರ ಘಟನೆಗಳನ್ನು ನಿಯಂತ್ರಣಕ್ಕೆ ತರಲು ನೋಡಲ್ ಅಧಿಕಾರಿಗಳಾಗಿರುತ್ತಾರೆ ಎಂದು ತಿಳಿಸಿದೆ.
ವಲಯ ಆಯುಕ್ತರು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯವನ್ನು ಸಾಧಿಸಿ, ತಮ್ಮ ವಲಯದಲ್ಲಿರುವ ಬ್ಯಾನರ್, ಪ್ಲೆಕ್ಸ್ ಮತ್ತು ಹೋರ್ಡಿಂಗ್‍ಗಳನ್ನು ತೆರವುಗೊಳಿಸಬೇಕು. ಹಾಗೆಯೇ ನಿಯಮಬಾಹಿರವಾಗಿ ಅವನ್ನು ಅಳವಡಿಸಿರುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಸೂಕ್ತವಾಗಿ ಪಾಲನೆ ಮಾಡದೆ ಇದ್ದರೆ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.