ʼಭಾರತದ ಪ್ರಜಾಪ್ರಭುತ್ವಕ್ಕೆ ಕರಾಳ ದಿನʼ; ರಾಹುಲ್ ಗಾಂಧಿ ಪರ ಟ್ವಿಟರ್ನಲ್ಲಿ ಅಭಿಯಾನ
"ಅಮೇಠಿಯೂ ಅಲ್ಲ, ವಯನಾಡೂ ಅಲ್ಲ, ಈಗ ಇಡೀ ಭಾರತವೇ ನಿಮ್ಮ ಕ್ಷೇತ್ರ, ಇಡೀ ಭಾರತದ ಪ್ರತಿನಿಧಿ ನೀವು"
ಹೊಸದಿಲ್ಲಿ: ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ರದ್ದುಗೊಳಿಸಿ ಲೋಕಸಭೆ ಸಚಿವಾಲಯ ಆದೇಶ ಹೊರಡಿಸುತ್ತಿದ್ದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಮಾತ್ರವಲ್ಲದೆ, ಹಲವು ಪ್ರತಿಪಕ್ಷಗಳು ಈ ನಡೆಯನ್ನು ವಿರೋಧಿಸಿದ್ದು, ಇದು ʼಭಾರತದ ಪ್ರಜಾಪ್ರಭುತ್ವಕ್ಕೆ ಕರಾಳ ದಿನʼ ಎಂದಿದ್ದಾರೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿ, “ರಾಹುಲ್ ಗಾಂಧಿ ಅವರ ಸದಸ್ಯತ್ವ ರದ್ದುಗೊಳಿಸಲಾಗಿದೆ. ನಮ್ಮ ದೇಶದಲ್ಲಿ ಕಳ್ಳ, ಕಳ್ಳ ಎಂದು ಕರೆಯುವುದು ಅಪರಾಧವಾಗಿಬಿಟ್ಟಿದೆ. ಕಳ್ಳರು ಮತ್ತು ಲೂಟಿಕೋರರು ಇನ್ನೂ ಮುಕ್ತರಾಗಿದ್ದಾರೆ, ಆದರೆ, ರಾಹುಲ್ ಗಾಂಧಿಗೆ ಶಿಕ್ಷೆಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಎಲ್ಲಾ ಸರ್ಕಾರಿ ವ್ಯವಸ್ಥೆಗಳು ಒತ್ತಡದಲ್ಲಿವೆ. ಇದು ಸರ್ವಾಧಿಕಾರದ ಅಂತ್ಯಕ್ಕೆ ಮುನ್ನುಡಿ” ಎಂದು ಹೇಳಿದ್ದಾರೆ.
ಟ್ವಿಟರಿನಲ್ಲಿ ರಾಹುಲ್ ಗಾಂಧಿ ಸದಸ್ಯತ್ವ ಅನರ್ಹಗೊಳಿಸಿದ್ದನ್ನು ಹಲವರು ವಿರೋಧಿಸಿದ್ದು, #BlackDayForIndianDemocracy (ಭಾರತದ ಪ್ರಜಾಪ್ರಭುತ್ವಕ್ಕೆ ಕರಾಳ ದಿನ) ಎಂದು ಟ್ವೀಟ್ ಮಾಡಿದ್ದಾರೆ.
ಈ ಅಭಿಯಾನದಲ್ಲಿ ಭಾಗಿಯಾದ ಚೇತನ್ ಕೃಷ್ಣ ಎಂಬವರು “ಅವರನ್ನು ಪಪ್ಪು ಎಂದು ಕರೆದು ಅಪಹಾಸ್ಯ ಮಾಡಿದರು, ಅವರ ಚಾರಿತ್ರ್ಯ ಹರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿದರು. ಆದರೆ, ಅವರು ಏಕಾಂಗಿಯಾಗಿ ಮೋದಿಯನ್ನು ನಡುಗುವಂತೆ ಮಾಡಿದರು. ಅವರ ವಿರುದ್ಧ ಅಗ್ಗದ ತಂತ್ರಗಳನ್ನು ಬಳಸಿದರು, ಅವರ ಹೆಸರು ರಾಹುಲ್ ಗಾಂಧಿ, ಅವರು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಗುಮುಖದಿಂದ ಹೋರಾಡಿದವರು” ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ಟೀಟ್ನಲ್ಲಿ, “ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿದ್ದನ್ನು ಇವರು ನಿಜ ಮಾಡಿ ತೋರಿಸಿದರು” ಎಂದು ಬರೆದಿದ್ದಾರೆ.
“ಅಮೇಠಿಯೂ ಅಲ್ಲ ವಯನಾಡೂ ಅಲ್ಲ, ಈಗ ಇಡೀ ಭಾರತವೇ ನಿಮ್ಮ ಕ್ಷೇತ್ರ. ಈಗ ನೀವು ಒಂದು ಜಿಲ್ಲೆಯ ಪ್ರತಿನಿಧಿಯಲ್ಲ ಇಡೀ ಭಾರತದ ಪ್ರತಿನಿಧಿ” ಎಂದು ಅಜಯ್ ಗವಾಲಿ ಎಂಬವರು ಟ್ವೀಟ್ ಮಾಡಿದ್ದಾರೆ.
ದೇಶದ ವಿವಿಧ ಭಾಗದಲ್ಲಿ ಈಗಾಗಲೇ ಪ್ರತಿಭಟನೆಗಳು ಆರಂಭವಾಗಿದ್ದು, ಕಾಂಗ್ರೆಸ್ ಸಂಸದೀಯ ಸಭೆ ಕೂಡಾ ನಡೆಸಿದೆ. ಈ ನಡುವೆ ತಮ್ಮದೇ ಆದ ರೀತಿಯಲ್ಲಿ ನೆಟ್ಟಿಗರು ರಾಹುಲ್ ಗಾಂಧಿಗೆ ಬೆಂಬಲ ನೀಡಿದ್ದಾರೆ.