ಸಿಸಿ ಕ್ಯಾಮರಾಗಳಿಂದ ಖಾಸಗಿತನಕ್ಕೆ ಧಕ್ಕೆ: ದ.ಕ. ಜಿಲ್ಲಾ ಎಸ್ಪಿ ಅಸಮಾಧಾನ

ಮಂಗಳೂರು: ಖಾಸಗಿ ವ್ಯಕ್ತಿಗಳು ತಮ್ಮ ಮನೆ ಹಾಗೂ ಕಟ್ಟಡಗಳಿಗೆ ಅಳವಡಿಸುವ ಸಿಸಿ ಕ್ಯಾಮರಾಗಳಿಂದ ಅಕ್ಕಪಕ್ಕದ ಮನೆಗಳಲ್ಲಿ ನೆಲೆಸಿರುವ ಜನರ ಖಾಸಗಿತನಕ್ಕೆ ಧಕ್ಕೆಯಾಗುವ ಸನ್ನಿವೇಶಗಳು ಸೃಷ್ಟಿಯಾಗಿವೆ ಎಂದು ದ.ಕ. ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ದಲಿತ ಮುಖಂಡರು ದೂರಿದರು.
ಪಂಜದಲ್ಲಿ ವ್ಯಕ್ತಿಯೊಬ್ಬರು ಸಿಸಿ ಕ್ಯಾಮರಾ ಅಳವಡಿಸಿರುವ ಹಿನ್ನೆಲೆಯಲ್ಲಿ ಎರಡು ಕುಟುಂಬಗಳಿಗೆ ತೊಂದರೆಯಾಗಿದೆ. ಅವರ ಸ್ನಾನ ಮಾಡುವುದನ್ನು ಸಿಸಿ ಕವರ್ ಮಾಡುತ್ತಿದೆ ಎಂದು ಪಂಜ ರಾಘವ ಎಂಬವರು ದೂರಿದರು. ಬೆಳ್ತಂಗಡಿಯಲ್ಲೂ ಇಂತಹ ಸಮಸ್ಯೆ ಇದೆ ಎಂದು ಇನ್ನೊಬ್ಬರು ಧ್ವನಿಗೂಡಿಸಿದಾಗ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ, ಏನಿದು ಅಸಹ್ಯ ಇಂತಹ ಪ್ರಕ್ರಿಯೆ ನಡೆಯಲೇಬಾರದು. ಈ ಬಗ್ಗೆ ಸಂಬಂಧಪಟ್ಟವರು ಲಿಖಿತ ದೂರು ನೀಡುವಂತೆ ಸೂಚಿಸಿದರು.
ಪಂಜದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು ಇದರ ಬಗ್ಗೆ ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಲ್ಲಿನ ಪೊಲೀಸ್ ಅಧಿಕಾರಿಗೆ ಸೂಚಿಸಿದರು.
ಯಾವುದೇ ವ್ಯಕ್ತಿ ಆತನ ಮನೆ, ಆಸ್ತಿಯಲ್ಲಿ ಮಾತ್ರವೇ ಸಿಸಿ ಕ್ಯಾಮರಾ ಅಳವಡಿಸಲು ಅವಕಾಶವಿದೆ. ಸಾರ್ವಜನಿಕರಿಗೆ ತೊಂದರೆಯಾಗುವ ಜಾಗದಲ್ಲಿ ಓಡಾಡುವ ಸಿಸಿ ಕ್ಯಾಮರಾ ಹಾಕಿದ್ದರೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದ.ಕ. ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ದಲಿತರ ಕುಂದುಕೊರತೆಗಳ ಸಭೆಯನ್ನು ಚುನಾವಣೆಯ ಬಳಿಕ ತಾಲೂಕಿನಲ್ಲಿಯೇ ತಿಂಗಳಿಗೊಂದರಂತೆ ಪರಿಣಾಮಕಾರಿ ಯಾಗಿ ನಡೆಸುವ ಮೂಲಕ ದಲಿತರಿಗೆ ಇಲಾಖೆ ಸೇವೆಯನ್ನು ಇನ್ನಷ್ಟು ಹತ್ತಿರದಲ್ಲಿಯೇ ಒದಗಿಸಲಾಗುವುದು ಎಂದು ಪೊಲೀಸ್ ವರಿಷ್ಟಾಧಿಕಾರಿ ಡಾ. ವಿಕ್ರಮ್ ಅಮಟೆ ತಿಳಿಸಿದರು.
ಡಿವೈಎಸ್ಪಿ ಗಾನ ಅವರು ನೋಡಲ್ ಅಧಿಕಾರಿಯಾಗಿದ್ದುಕೊಂಡು ಜಿಲ್ಲಾ ಮಟ್ಟದಲ್ಲಿ ದಲಿತರು ಹಾಗೂ ಪೊಲೀಸರ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸುವ ಕಾರ್ಯವೂ ನಡೆಯಲಿದೆ ಎಂದು ಅವರು ತಿಳಿಸಿದರು.
ಮುಂಬರುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ದೂರುಗಳಿದ್ದಲಿ ನೀಡಿ ಚುನಾವಣೆಗೆ ಸಂಬಂಧಿಸಿ ಏನೇ ದೂರುಗಳಿದ್ದಲ್ಲಿ, ಯಾರಾದರೂ ಮತ ಚಲಾವಣೆಗೆ ಸಂಬಂಧಿಸಿ ಪ್ರಭಾವ ಬೀರಲು ಪ್ರಯತ್ನಿಸಿದಲ್ಲಿ, ಅನೈತಿಕ ಚಟುವಟಿಕೆಗಳ ಕುರಿತಂತೆಯೂ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅವರು ಹೇಳಿದರು.
ಮೊಬೈಲ್‌ಗಳು ಕಳೆದು ಕೊಂಡರೆ ಅದರ ದುರ್ಬಳಕೆಯನ್ನು ತಡೆಗಟ್ಟಲು ಅಂತಹ ಫೋನ್‌ಗಳನ್ನು ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆಯು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ ಅದನ್ನು ವಾರಿಸುದಾರರಿಗೆ ತಲುಪಿಸುತ್ತಿದ್ದು, ಇದರ ಉಪಯೋಗವನ್ನು ಮಾಡುವಂತೆ ಅವರು ಈ ಸಂದರ್ಭ ಕರೆ ನೀಡಿದರು.
2021ರಲ್ಲಿ ಶಿಬಾಜೆಯ ಪ್ರಕರಣವೊಂದರಲ್ಲಿ ವಿಕಲಚೇತನ ದಲಿತ ವ್ಯಕ್ತಿಯ ಮೇಲಿನ ಪೊಲೀಸ್ ಹಲ್ಲೆಗೆ ಸಂಬಂಧಿಸಿ ಪೊಲೀಸರ ಮೇಲಿನ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಲಾಗಿದ್ದು, ಸಂತ್ರಸ್ತ ದಲಿತನ ಮೇಲಿನ ಪ್ರಕರಣ ಮುಂದುವರಿಸಲಾಗಿದೆ ಎಂದು ದಲಿತ ನಾಯಕಿ ಈಶ್ವರಿ ದೂರಿದರು. ಈ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿದರೆ ವಿಚಾರಣೆ ನಡೆಸುವುದಾಗಿ ಎಸ್ಪಿ ಅಮಟೆ ಭರವಸೆ ನೀಡಿದರು.
ಎಡಿಶನಲ್ ಎಸ್ಪಿ ಧರ್ಮಪ್ಪ, ಡಿವೈಎಸ್ಪಿಗಳಾದ ವೀರಯ್ಯ ಹಿರೇಮಠ್, ಪಿ.ಟಿ. ಥೋರಟ್ ಉಪಸ್ಥಿತರಿದ್ದರು.