ಎ.6ಕ್ಕೆ ನಂದಳಿಕೆ ಅಯನೋತ್ಸವ ಸಿರಿ ಜಾತ್ರಾ ಮಹೋತ್ಸವ

ಉಡುಪಿ, ಮಾ.24: ಕಾರ್ಕಳ ತಾಲೂಕು ಇತಿಹಾಸ ಪ್ರಸಿದ್ಧ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ನಡೆಯುವ ನಂದಳಿಕೆ ಅಯನೋತ್ಸವ ಸಿರಿಜಾತ್ರೆ ಈ ಬಾರಿ ಎ.6 ಗುರುವಾರದಂದು ನಡೆಯಲಿದೆ ಎಂದು ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ ಇಂದು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಳುನಾಡಿನ ಪ್ರಸಿದ್ಧ ಸಿರಿ ಜಾತ್ರೆಗಳಲ್ಲಿ ಒಂದಾದ ನಂದಳಿಕೆ ಸಿರಿಜಾತ್ರೆ ಯಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸಲಿದ್ದಾರೆ. ಈ ಬಾರಿಯೂ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದವರು ತಿಳಿಸಿದರು.
ಕನ್ನಡ ಸಾಹಿತ್ಯದಲ್ಲಿ ನವೋದಯದ ಮುಂಗೋಳಿ ಎಂದೇ ಕರೆಸಿಕೊಳ್ಳುವ ಕವಿ ಮುದ್ದಣ ಜನಿಸಿದ ನಂದಳಿಕೆ, ಮಹಾಲಿಂಗೇಶ್ವರನ ಸನ್ನಿಧಿಯಲ್ಲಿರುವ ಅಬ್ಬಗ-ದಾರಗ ಸಿರಿಜಾತ್ರೆಯ ಮೂಲಕ ಧಾರ್ಮಿಕ ಕ್ಷೇತ್ರದಲ್ಲೂ ಪ್ರಸಿದ್ಧಿ ಯನ್ನು ಪಡೆದಿದೆ. ನಂದಳಿಕೆ ಸಿರಿ ಜಾತ್ರೆಯ ಪ್ರಚಾರ ಫಲಕಗಳು ಪ್ರತಿವರ್ಷ ವಿಭಿನ್ನತೆ ಯೊಂದಿಗೆ ಜಿಲ್ಲೆಯಾ ದ್ಯಂತ ಜನಮನವನ್ನು ಸೆಳೆಯುತಿದ್ದು, ಪ್ರತಿ ಸಲದಂತೆ ಈ ಬಾರಿಯೂ ವಿಭಿನ್ನವಾದ ಪ್ರಚಾರ ಫಲಕವನ್ನು ಜಿಲ್ಲೆಯಾದ್ಯಂತ ಅಳವಡಿಸಲಾಗುತ್ತದೆ ಎಂದು ಸುಹಾಸ್ ಹೆಗ್ಡೆ ತಿಳಿಸಿದರು.
ಈ ಬಾರಿ ಪರಿಸರ ಸ್ನೇಹಿ ರಟ್ಟಿನ ಬಾಕ್ಸ್ ಮೇಲೆ ಮಣ್ಣಿನ ಪಾತ್ರೆಯಲ್ಲಿ ನೀರು ತುಂಬಿಟ್ಟು ಹಕ್ಕಿಗಳಿಗೆ ನೀರುಣಿಸುವ ಮೂಲಕ ಸಿರಿಜಾತ್ರೆಯ ಪ್ರಚಾರ ದೊಂದಿಗೆ ಪರಿಸರದ ಹಕ್ಕಿಗಳ ಬಾಯಾರಿಕೆ ತಣಿಸುವ ಪ್ರಯತ್ನ ಮಾಡಲಾ ಗುತ್ತಿದೆ ಎಂದವರು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಸುಬಾಸ್ ಹೆಗ್ಡೆ, ಸಿದ್ಧಾಪುರದಲ್ಲಿ ತಯಾರಿಸಿದ ಮಣ್ಣಿನ ಚಿಕ್ಕ ಪಾತ್ರೆ ಹಾಗೂ ಪೇಪರ್ ರಟ್ಟಿನ ಮೇಲೆ ಮುದ್ರಿಸಿದ ನಂದಳಿಕೆ ಸಿರಿ ಜಾತ್ರೆಯ ಪ್ರಚಾರಕ್ಕೆ ಸುಮಾರು 150ರೂ. ವೆಚ್ಚವಾಗಿದೆ. ಈ ಬಾರಿ 1500ರಷ್ಟು ಪ್ರಚಾರ ಫಲಕವನ್ನು ಸಿದ್ಧಪಡಿಸಿದ್ದೇವೆ ಎಂದರು.
ಈ ಹಿಂದಿನಂತೆ ಇವುಗಳನ್ನು ರಸ್ತೆಯ ಪಕ್ಕದಲ್ಲಿ ಇಡದೇ, ಅಲ್ಲಲ್ಲಿ ರಸ್ತೆ ಪಕ್ಕ ಮನೆ ಹಾಗೂ ಅಂಗಡಿಗಳ ಮುಂಭಾಗದಲ್ಲಿ ಇದನ್ನು ಅಳವಡಿಸಿ, ಇದರ ಸುಪರ್ದಿಯನ್ನು ಆಯಾ ಮನೆ ಅಥವಾ ಅಂಗಡಿಯವರಿಗೆ ವಹಿಸಲಾ ಗುವುದು. ಅವರು ಪ್ರತಿದಿನ ಪಕ್ಷಿಗಳಿಗಾಗಿ ಮಣ್ಣಿನ ಪಾತ್ರೆಗೆ ನೀರು ಹಾಕಬೇಕಾಗುತ್ತದೆ ಎಂದರು.
ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಸಿರಿ ಜಾತ್ರೆ ನಮ್ಮ ಉದ್ದೇಶವಾಗಿದೆ. ಉಡುಪಿ, ದಕ್ಷಿಣಕನ್ನಡವಲ್ಲದೇ ಆಸುಪಾಸಿನ ನಾಲ್ಕೈದು ಜಿಲ್ಲೆಗಳಿಂದ ನಂದಳಿಕೆ ಸಿರಿಜಾತ್ರೆಗೆ ಭಕ್ತರು ಆಗಮಿಸಲಿದ್ದಾರೆ. 1500ರಷ್ಟು ಸ್ವಯಂ ಸೇವಕರು ಜಾತ್ರೆಯ ವೇಳೆ ಕಾರ್ಯನಿರ್ವಹಿಸಲಿದ್ದಾರೆ ಎಂದರು.