ಮಂಗಳೂರು : ಬಸ್ ಢಿಕ್ಕಿ; ಬಾಲಕ ಮೃತ್ಯು

ಮಂಗಳೂರು: ನಗರದ ಕಂಕನಾಡಿ ಸಮೀಪದ ಬೆಂದೂರ್‌ವೆಲ್ ಬಳಿ ಶುಕ್ರವಾರ ನಡೆದ ಅಪಘಾತವೊಂದರಲ್ಲಿ ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದ ಬಾಲಕ ಮೃತಪಟ್ಟಿರುವುದಾಗಿ ವರದಿಯಾಗಿದೆ.
ನಗರದ ನಂತೂರಿನ ಹಾರ್ದಿಕ್ (11) ಮೃತಪಟ್ಟರೆ, ಆತನ ತಾಯಿ, ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಶ್ವೇತಾ (35) ಗಾಯಗೊಂಡಿದ್ದಾರೆ.
ಶುಕ್ರವಾರ ಅಪರಾಹ್ನ ಶ್ವೇತಾ ತನ್ನ ಮಗ ಹಾರ್ದಿಕ್ ಜೊತೆ ಕಂಕನಾಡಿಯಿಂದ ನಂತೂರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಬೆಂದೂರ್‌ವೆಲ್ ಸಮೀಪ ನಿಂತಿದ್ದ ಬಸ್ ಏಕಾಏಕಿ ಚಲಿಸಿತು ಎನ್ನಲಾಗಿದೆ. ಈ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರೂ ರಸ್ತೆಗೆಸೆಯಲ್ಪಟ್ಟರು. ಈ ವೇಳೆ ಇನ್ನೊಂದು ಬಸ್ ಏಕಾಏಕಿ ಆಗಮಿಸಿದ್ದು, ಬಾಲಕನ ಮೇಲೆಯೇ ಆ ಬಸ್ ಹರಿಯಿತು ಎನ್ನಲಾಗಿದೆ. ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟರೆ, ಗಾಯಗೊಂಡ ಶ್ವೇತಾರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮೃತ ಬಾಲಕ ನಗರದ ಕೊಡಿಯಾಲ್‌ಬೈಲ್ ಶಾಲೆಯೊಂದರ 5ನೇ ತರಗತಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.