5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಮುಂದೂಡಲು ಮತ್ತೆ ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ಮಾ.24: ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗಳಿಗೆ ಮಾ.27ರಿಂದ ನಡೆಯಲಿರುವ ಬೋರ್ಡ್ ಪರೀಕ್ಷೆಗಳನ್ನು ಮುಂದೂಡುವುದಕ್ಕೆ ಹೈಕೋರ್ಟ್ ಮತ್ತೊಮ್ಮೆ ನಿರಾಕರಿಸಿದೆ.
ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ(ಕುಸ್ಮಾ) ಪರ ವಕೀಲ ಕೆ.ವಿ.ಧನಂಜಯ್ ಅವರು, ಶುಕ್ರವಾರ ನ್ಯಾ.ಜಿ.ನರೇಂದ್ರ ನೇತೃತ್ವದ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿ, ಪರೀಕ್ಷೆ ಮುಂದೂಡಲು ಕೋರಿದರು.
ಅಲ್ಲದೆ, 5 ಮತ್ತು 8ನೇ ತರಗತಿಗಳಿಗೆ ಮಾ.27 ರಂದು ಪರೀಕ್ಷೆ ನಡೆಸುವುದಕ್ಕೆ ರಾಜ್ಯ ಪ್ರಾರ್ಥಮಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ಮಕ್ಕಳ ಪೋಷಕರು ಸಲ್ಲಿಸಿರುವ ಅರ್ಜಿಗಳು ಮಾ.27 ರಂದೇ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಹೀಗಾಗಿ, ಪರೀಕ್ಷೆ ಮತ್ತು ವಿಚಾರಣೆ ಒಂದೇ ದಿನ ಇರುವುದರಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಅರ್ಜಿದಾರರ ಪರ ವಕೀಲಾರಾದ ಕೆ.ವಿ.ಧನಂಜಯ್ ಅವರು ಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣ ಪ್ರಸ್ತುತ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಹೀಗಾಗಿ, ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಸುಪ್ರೀಂಕೋರ್ಟ್ ಯಾವ ತೀರ್ಪು ನೀಡುತ್ತದೆಯೋ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿತು. ಅಲ್ಲದೆ, ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿತು.