ಹಿರಿಯ ಪತ್ರಕರ್ತ, ಕಾಮ್ರೇಡ್ ಎಂ.ಲಿಂಗಪ್ಪ ನಿಧನ
ಶಿವಮೊಗ್ಗ: ಹಿರಿಯ ಪತ್ರಕರ್ತ, ಕ್ರಾಂತಿಭಗತ್ ದಿನಪತ್ರಿಕೆ ಸಂಪಾದಕರಾದ ಕಾಮ್ರೇಡ್ ಎಂ.ಲಿಂಗಪ್ಪ ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಅವರಿಗೆ 98 ವರ್ಷ ವಯಸ್ಸಾಗಿತ್ತು. ಪುತ್ರಿ, ಮೊಮ್ಮಗ ಸೇರಿದಂತೆ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ತಲೆ ಸುತ್ತಿನಿಂದ ಬಿದ್ದಿದ್ದ ಅವರನ್ನು, ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಗೋಪಾಳದ ಪ್ರೆಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶನಿವಾರ ಮಧ್ಯಾಹ್ನ 12 ಗಂಟೆ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ ಕುಟುಂಬದವರು ತಿಳಿಸಿದ್ದಾರೆ.
ಸಂತಾಪ:
ಹಿರಿಯ ಪತ್ರಕರ್ತ, ಕ್ರಾಂತಿಭಗತ್ ಪತ್ರಿಕೆಯ ಸಂಪಾದಕ, ಹೋರಾಟಗಾರ ಕಾಮ್ರೇಡ್ ಎಂ. ಲಿಂಗಪ್ಪ ಅವರ ನಿಧನದಿಂದಾಗಿ ಪತ್ರಿಕೋದ್ಯಮದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್ಟ್ರಸ್ಟ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ತಮ್ಮ ನಿಷ್ಠುರ ನುಡಿಗಳಿಂದ, ನೇರಾ ನೇರಾ ಮಾತುಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಅಂದುಕೊಂಡಂತೆ ನಡೆದವರು. ಸಮಾಜದಲ್ಲಿ ಆಗುತ್ತಿದ್ದ ಅನ್ಯಾಯಗಳನ್ನು ಕಟು ಮಾತುಗಳಿಂದ ಟೀಕಿಸುತ್ತಿದ್ದರು. ಇವರ ನಿಧನ ಪತ್ರಿಕೋದ್ಯಮಕ್ಕೆ ಆದ ದೊಡ್ಡ ನಷ್ಟ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎಸ್. ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಉಪಾಧ್ಯಕ್ಷ ಕೆ. ತಿಮ್ಮಪ್ಪ, ಖಜಾಂಚಿ ನಂದನ್, ಕಾರ್ಯದರ್ಶಿ ಗೋ.ವ. ಮೋಹನಕೃಷ್ಣ, ಟ್ರಸ್ಟ್ ಉಪಾಧ್ಯಕ್ಷ ಚಂದ್ರಹಾಸ್ ಹಿರೇಮಳಲಿ, ಕಾರ್ಯದರ್ಶಿ ನಾಗರಾಜ್ ನೇರಿಗೆ, ಖಜಾಂಚಿ ಜೇಸುದಾಸ್, ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್, ಸಹಕಾರ್ಯದರ್ಶಿ ಗಿರೀಶ್ ಉಮ್ರಾಯ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ಪತ್ರಕರ್ತ ಕಾಮ್ರೇಡ್ ಲಿಂಗಪ್ಪ ರವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಘಟಕ ತೀವ್ರ ಸಂತಾಪ ಸೂಚಿಸಿದೆ.
95ನೇ ವರ್ಷದಲ್ಲೂ ಯುವಕನಂತೆ ಎಲ್ಲೆಡೆ ಓಡಾಡಿ, ತಾವೇ ವರದಿ ಮಾಡಿ ಕ್ರಾಂತಿಭಗತ್ ಪತ್ರಿಕೆ ನಡೆಸುತ್ತಿದ್ದ ಲಿಂಗಪ್ಪನವರು ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು ಎಂದು ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ತಿಳಿಸಿದ್ದಾರೆ.
ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ.