ಚೀನಾದಲ್ಲಿ ಉಯಿಗರ್‌ಗಳಿಗೆ ದೌರ್ಜನ್ಯ: ಚಿತ್ರಹಿಂಸೆ ಹೇಳಿಕೆ ದಾಖಲಿಸಿಕೊಂಡ ಅಮೆರಿಕ ಸಂಸದೀಯ ಸಮಿತಿ
ವಾಷಿಂಗ್ಟನ್, ಮಾ.24: ಚೀನಾದ ವ್ಯವಹಾರಗಳಿಗೆ ಸಂಬಂಧಿಸಿದ ಅಮೆರಿಕ ಸಂಸತ್ ನ ಸಮಿತಿಯು ಚೀನಾದ ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಉಯಿಗರ್ ಹಾಗೂ ಇತರ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಎರಡನೇ ಹಂತದ ವಿಚಾರಣೆ ಆರಂಭಿಸಿದೆ ಎಂದು ವರದಿಯಾಗಿದೆ.
ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಚೀನಾದ ಆಡಳಿತ ಉಯಿಗರ್ಗಳು ಹಾಗೂ ಇತರ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ನರಮೇಧ ನಡೆಸುತ್ತಿದೆ ಎಂಬ ಅಮೆರಿಕ ಆರೋಪವನ್ನು ಕೇಂದ್ರೀಕರಿಸಿ ಸಮಿತಿ ವಿಚಾರಣಾ ಪ್ರಕ್ರಿಯೆ ಮುಂದುವರಿದಿದೆ.
ವಿಚಾರಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನ ಸುದ್ಧಿಗಾರರ ಜತೆ ಮಾತನಾಡಿದ ಸದನ ಸಮಿತಿಯ ಅಧ್ಯಕ್ಷ ಮೈಕ್ ಗ್ಯಾಲಘರ್ `ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಜಗತ್ತು ಹೇಗಿರುತ್ತದೆ ಎಂಬುದಕ್ಕೆ ಕ್ಸಿನ್ಜಿಯಾಂಗ್ನ ಪರಿಸ್ಥಿತಿ ಎಚ್ಚರಿಕೆಯ ಕರೆಗಂಟೆಯಾಗಬೇಕಿದೆ' ಎಂದರು.
ಸಮಿತಿಯ ಎದುರು ಹೇಳಿಕೆ ನೀಡಿದ ಉಯಿಗರ್ ಮಹಿಳೆ ಗುಲ್ಬಹಾರ್ ಹೈತಿವಾಜಿ `ಕ್ಸಿನ್ಜಿಯಾಂಗ್ನ ನಿರಾಶ್ರಿತರ ಶಿಬಿರದಲ್ಲಿ ತಾನು 2 ವರ್ಷ ನೆಲೆಸಿದ್ದು ಈ ಸಂದರ್ಭ ಬಲವಂತದ ದೇಶಭಕ್ತಿ ಶಿಕ್ಷಣದ ಜತೆ ನಿಂದನೆಯನ್ನು ಎದುರಿಸಬೇಕಾಗಿತ್ತು' ಎಂದರು.
ಇದೇ ಶಿಬಿರದಲ್ಲಿ ಶಿಕ್ಷಕಿಯಾಗಿ ನಿಯೋಜನೆಗೊಂಡಿದ್ದ ಕ್ವೆಲ್ಬಿನೂರ್ ಸಿದಿಕ್ ಎಂಬ ಮಹಿಳೆ `ಶಿಬಿರದಲ್ಲಿನ ನಿವಾಸಿಗಳು ನಿರಂತರ ಚಿತ್ರಹಿಂಸೆ ಮತ್ತು ವಿಚಾರಣೆಗೆ ಒಳಗಾಗಬೇಕಿತ್ತು' ಎಂದಿದ್ದಾರೆ. ಈ ಇಬ್ಬರೂ ಮಹಿಳೆಯರು ಶಿಬಿರದಿಂದ ತಪ್ಪಿಸಿಕೊಂಡು ಯುರೋಪ್ಗೆ ತೆರಳಲು ಯಶಸ್ವಿಯಾಗಿದ್ದು ಈಗ ಯುರೋಪ್ನಲ್ಲಿ ನೆಲೆಸಿದ್ದಾರೆ. ಉಯಿಗರ್ ಅಮೆರಿಕನ್ ನ್ಯಾಯವಾದಿ ನೂರಿ ಟರ್ಕೆಲ್, ಕ್ಸಿನ್ಜಿಯಾಂಗ್ನಲ್ಲಿ ಬಂಧನ ಶಿಬಿರದ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಲು ಬಯಸಿದ್ದ ಜರ್ಮನ್ ಸಂಶೋಧಕ ಆಡ್ರಿಯನ್ ಝೆಂಜ್ ಮುಂತಾದವರ ಹೇಳಿಕೆಯನ್ನೂ ಸಮಿತಿ ದಾಖಲಿಸಿಕೊಂಡಿತು.
ಕ್ಸಿನ್ಜಿಯಾಂಗ್ನಲ್ಲಿ ಚೀನಾ ಆಡಳಿತ ಜಾರಿಗೊಳಿಸಿರುವ ಜನನ ನಿಯಂತ್ರಣ ಮತ್ತು ಸಾಮೂಹಿಕ ಬಂಧನ ನೀತಿಗಳು ನರಮೇಧಕ್ಕೆ ಸಮ ಎಂದು ಅಮೆರಿಕ, ಬ್ರಿಟನ್, ಕೆನಡಾ ಹಾಗೂ ಇತರ ಕೆಲವು ದೇಶಗಳು ಬಣ್ಣಿಸಿವೆ. ಸಾಮೂಹಿಕ ಕಣ್ಗಾವಲು ಮತ್ತು ಬಂಧನ, ಚಿತ್ರಹಿಂಸೆ, ಮಕ್ಕಳ ವರ್ಗಾವಣೆ, ಸಂತಾನೋತ್ಪತ್ತಿಯ ಮೇಲಿನ ಮಿತಿ ಸೇರಿದಂತೆ ಉಯಿಗರ್ ಜನರನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಲು ಚೀನಾ ಸರಕಾರ ಸೂಕ್ಷ್ಮ ತಂತ್ರಗಳನ್ನು ಬಳಸುತ್ತಿದೆ ಎಂದು ಹಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ವಲಯದಲ್ಲಿ ಚೀನಾವು ಮನುಕುಲದ ವಿರುದ್ಧದ ಅಪರಾಧ ಎಸಗಿರುವ ಸಾಧ್ಯತೆಯಿದೆ ಎಂದು ಕಳೆದ ವರ್ಷ ವಿಶ್ವಸಂಸ್ಥೆಯ ವರದಿ ಹೇಳಿತ್ತು.
ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂಬ ವರದಿಯನ್ನು ಉಗ್ರವಾಗಿ ಖಂಡಿಸುವ ಚೀನಾ `ತಾನು ಆ ಪ್ರಾಂತದಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಧಾರ್ಮಿಕ ಮೂಲಭೂತವಾದವನ್ನು ನಿಗ್ರಹಿಸಲು ವೃತ್ತಿಪರ ಕೇಂದ್ರಗಳನ್ನು ಸ್ಥಾಪಿಸಿರುವುದಾಗಿ' ಪ್ರತಿಪಾದಿಸುತ್ತಿದೆ. `ಅಮೆರಿಕದ ಸಂಸದೀಯ ಸಮಿತಿ ಯೋಜಿತ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡು, ಗುಪ್ತ ರಾಜಕೀಯ ಉದ್ದೇಶದ ಸಾಧನೆಗಾಗಿ ಕ್ಸಿನ್ಜಿಯಾಂಗ್ಗೆ ಸಂಬಂಧಿಸಿ ಸುಳ್ಳುಗಳ ಸರಮಾಲೆಯನ್ನು ಪೋಣಿಸುತ್ತಿದೆ' ಎಂದು ಅಮೆರಿಕದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ಪ್ರತಿಕ್ರಿಯಿಸಿದ್ದಾರೆ.