ತರೀಕೆರೆ: 150 ಕ್ವಿಂಟಾಲ್ ಅಕ್ಕಿ ಮೂಟೆಗಳು, ದಾಖಲೆ ಇಲ್ಲದ 3.50 ಲಕ್ಷ ರೂ. ವಶಕ್ಕೆ
ಚಿಕ್ಕಮಗಳೂರು, ಮಾ.24: ಚುನಾವಣಾ ನೀತಿ ಸಂಹಿತೆ ಜಾರಿ ಪೂರ್ವದಲ್ಲಿ ಚುನಾವಣಾ ಅಕ್ರಮಗಳ ಬೆನ್ನು ಬಿದ್ದಿರುವ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಜಿಲ್ಲಾದ್ಯಂತ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಚಿನ್ನಾಭರಣ, ಸೀರೆ, ಕುಕ್ಕರ್‌ಗಳನ್ನು ಜಪ್ತಿ ಮಾಡಿರುವ ಘಟನೆಗಳ ಬೆನ್ನಲ್ಲೇ ಶುಕ್ರವಾರ ಮತದಾರರಿಗೆ ಹಂಚಲು ತರಲಾಗುತ್ತಿದ್ದ 150 ಕ್ವಿಂಟಾಲ್ ಅಕ್ಕಿ ಮೂಟೆ ಹಾಗೂ 3.50 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ತರೀಕೆರೆ ತಾಲೂಕಿನ ಎಂ.ಸಿ.ಕ್ಯಾಂಪ್ ಚೆಕ್‌ಪೋಸ್ಟ್ ಬಳಿ ಟೆಂಪೋವೊಂದನ್ನು ತಪಾಸಣೆ ಮಾಡಿದ ಪೊಲೀಸರು ಹಾಗೂ ತರೀಕೆರೆ ತಾಲೂಕಿನ ಚುನಾವಣಾಧಿಕಾರಿಗಳ ತಂಡ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 150 ಕ್ವಿಂಟಾಲ್ ಅಕ್ಕಿ ಮೂಟೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅಕ್ಕಿ ಮೂಟೆಗಳನ್ನು ಮತದಾರರಿಗೆ ಹಂಚಿಕೆ ಮಾಡಲು ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ವಾಹನ ಚಾಲಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳ ತಂಡ ಅಕ್ಕಿ ವಾಹನ ಸಹಿತ ಅಕ್ಕಿಮೂಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಸಂಬಂಧ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 3.50 ಲಕ್ಷ ರೂ. ವಶಕ್ಕೆ:
ತರೀಕೆರೆ ತಾಲೂಕಿನಲ್ಲಿ ಶುಕ್ರವಾರ ಬೆಳಗ್ಗೆ ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಹಾಗೂ ಚುನಾವಣಾಧಿಕಾರಿಗಳ ತಂಡ ಮಧ್ಯಾಹ್ನದ ವೇಳೆ ಕಾರಿನಲ್ಲಿ ಶಿವಮೊಗ್ಗದಿಂದ ತರೀಕೆರೆಗೆ ತರಲಾಗುತ್ತಿದ್ದ ದಾಖಲೆ ಇಲ್ಲದ 3.50 ಲಕ್ಷ ರೂ.ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಣವನ್ನು ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಿಕೆ ಮಾಡಲು ತರಲಾಗುತ್ತಿತ್ತೆಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ