'ಪ್ರಧಾನಿ ಕಚೇರಿ'ಯ ನಕಲಿ ಅಧಿಕಾರಿಗಳ ತಂಡದಲ್ಲಿ ಪುತ್ರ ಭಾಗಿ: ಗುಜರಾತ್ ಸಿಎಂ ಕಚೇರಿಯ ಹಿರಿಯ ಅಧಿಕಾರಿ ರಾಜೀನಾಮೆ
ಶ್ರೀನಗರ: ಪ್ರಧಾನಮಂತ್ರಿ ಕಚೇರಿಯ ಅಧಿಕೃತ ತಂಡದ ಸೋಗಿನಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ವಂಚಿಸಿದ ತಂಡದಲ್ಲಿ ತಮ್ಮ ಪುತ್ರನು ಭಾಗವಾಗಿದ್ದ ಎಂಬ ವಿಚಾರ ಭಾರೀ ವಿವಾದ ಉಂಟಾದ ನಂತರ ಗುಜರಾತ್ ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿ ಹಿತೇಶ್ ಪಾಂಡ್ಯ ರಾಜೀನಾಮೆ ನೀಡಿದ್ದಾರೆ.
ಪಾಂಡ್ಯ ಅವರ ಪುತ್ರ ಅಮಿತ್ ಹಿತೇಶ್ ಪಾಂಡ್ಯ ಈ ತಿಂಗಳ ಆರಂಭದಲ್ಲಿ ಬಂಧನದ ನಂತರ ಸುದ್ದಿಯಾಗಿದ್ದ ಕಿರಣ್ ಭಾಯ್ ಪಟೇಲ್ ನೇತೃತ್ವದ 'ಪ್ರಧಾನಿ ಕಚೇರಿ'ಯ ನಕಲಿ 'ಅಧಿಕೃತ ತಂಡ'ದ ಭಾಗವಾಗಿದ್ದ.
2001 ರಿಂದ ಗುಜರಾತ್ ಮುಖ್ಯಮಂತ್ರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಆಗಿ ಸೇವೆ ಸಲ್ಲಿಸುತ್ತಿರುವ ಪಾಂಡ್ಯ ಅವರು ನಿನ್ನೆ ಸಂಜೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ತನ್ನ ಮಗ "ನಿರಪರಾಧಿ" ಆಗಿದ್ದರೂ, ಪ್ರಧಾನ ಮಂತ್ರಿ ಕಚೇರಿ ಮತ್ತು ಗುಜರಾತ್ ಮುಖ್ಯಮಂತ್ರಿ ಕಚೇರಿಯ ಇಮೇಜ್‌ಗೆ ಕಳಂಕ ತರಲು ನಾನು ಬಯಸುವುದಿಲ್ಲ ಎಂದು ಪಾಂಡ್ಯ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
"ನನ್ನ ಮಗ ನಿರಪರಾಧಿ. ಆದರೆ, ಸಿಎಂಒ ಮತ್ತು ಪಿಎಂಒ ಇಮೇಜ್‌ಗೆ ಧಕ್ಕೆಯಾಗುವುದು ನನಗೆ ಇಷ್ಟವಿಲ್ಲ, ಆದ್ದರಿಂದ ನಾನು ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಪಾಂಡ್ಯ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಗುಜರಾತ್ ಬಿಜೆಪಿ ಕೂಡ ಅಮಿತ್ ಪಾಂಡ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ ಎಂದು ವರದಿಯಾಗಿದೆ. ಪಾಂಡ್ಯ ಅವರು ಗುಜರಾತ್‌ನ ಉತ್ತರ ವಲಯದ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಉಸ್ತುವಾರಿ ವಹಿಸಿದ್ದರು.
ಪ್ರಧಾನ ಮಂತ್ರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಯಾಗಿ ಪೋಸ್ ನೀಡುತ್ತಾ ನಾಲ್ಕು ತಿಂಗಳ ಕಾಲ ಅಧಿಕೃತ ಪ್ರೋಟೋಕಾಲ್ ಅನ್ನು ಅನುಭವಿಸಿದ್ದ ಕಿರಣ್ ಭಾಯ್ ಪಟೇಲ್ ನನ್ನು ಮಾ.2ರಂದು ಬಂಧಿಸಲಾಯಿತು.
ಪಾಂಡ್ಯ ಅವರ ಪುತ್ರ ಅಮಿತ್ ಹಿತೇಶ್ ಪಾಂಡ್ಯ ಅವರು ಕಿರಣ್ ಭಾಯ್ ಪಟೇಲ್ ನೇತೃತ್ವದ ನಕಲಿ 'ಅಧಿಕೃತ ತಂಡ'ದ ಭಾಗವಾಗಿದ್ದ.
ಅಮಿತ್ ಹಿತೇಶ್ ಪಾಂಡ್ಯ, ಗುಜರಾತ್‌ನ ಜೇ ಸಿತಾಪರಾ ಹಾಗೂ ರಾಜಸ್ಥಾನದ ತ್ರಿಲೋಕ್ ಸಿಂಗ್ ಅವರು ಶ್ರೀನಗರದ ಪಂಚತಾರಾ ಹೋಟೆಲ್‌ನಲ್ಲಿ ಪಟೇಲ್ ಅವರೊಂದಿಗೆ ಉಳಿದುಕೊಂಡಿದ್ದರು ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ತಂಡದಂತೆ ನಟಿಸಿದ್ದರು.