ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಳ: ನ್ಯಾ.ಫಣೀಂದ್ರ

ಉಡುಪಿ, ಮಾ.25: ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ಹಣಕ್ಕಾಗಿ ಮಕ್ಕಳ ಮಾರಾಟ, ಮನೆಯಲ್ಲೆ ಮಗಳ ಹಕ್ಕಿನ ಉಲ್ಲಂಘನೆ ಸೇರಿದಂತೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೆಲ್ಲವನ್ನು ತಡೆಯಲು ಪೊಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಚೈಲ್ಡ್ಲೈನ್ 1098 ಉಡುಪಿ, ರೋಟರಿ ಉಡುಪಿ ಮತ್ತು ಉಡುಪಿ ಧನ್ವಂತರಿ ಕಾಲೇಜು ಆಫ್ ನರ್ಸಿಂಗ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂತೆಕಟ್ಟೆಯಲ್ಲಿರುವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳನ್ನು ಮನೆಯಲ್ಲಿ ಪಾಲಕರು, ಪೋಷಕರು ಯಾವ ರೀತಿ ಆರೈಕೆ ಮಾಡುತ್ತಾರೆ ಎಂಬುದು ಮುಖ್ಯ. ಸಂವಿಧಾನದ ಪ್ರಕಾರ ಮಹಿಳೆಯರು ಮತ್ತು ಪುರುಷರು ಸಮಾನರು. ಮಕ್ಕಳ ರಕ್ಷಣೆಗಾಗಿ ಪೋಕ್ಸೋ ಕಾಯ್ದೆ ಇರುವಂತೆ ಮಹಿಳೆಯರ ರಕ್ಷಣೆಗೂ ಹಲವು ಕಾನೂನುಗಳಿವೆ ಎಂದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಭ್ರಷ್ಟಾಚಾರ ಮುಕ್ತ ಧೋರಣೆ ಹೊಂದಿ, ಮುಂದೆ ವೃತ್ತಿ ಜೀವನದಲ್ಲಿ ಅದನ್ನು ಪಾಲನೆ ಮಾಡಿದಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಶರ್ಮಿಳಾ ಎಸ್. ಮಾತನಾಡಿ ದರು. ಈ ಸಂದರ್ಭದಲ್ಲಿ ಸಾಧಕರಾದ ಪ್ರೇಮಾ ಭಂಡಾರಿ ಹಾಗೂ ಶಾಂತಿ ಮಾರ್ಗರೇಟ್ ಅವರನ್ನು ಸನ್ಮಾನಿಸಲಾಯಿತು.
ಧನ್ವಂತರಿ ಕಾಲೇಜಿನ ಅಧ್ಯಕ್ಷ ಡಾ.ಉಮೇಶ್ ಪ್ರಭು, ಉಡುಪಿ ರೋಟರಿ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ಕಾರಂತ್ ಉಪಸ್ಥಿತರಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ದರು. ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.