ಸ್ನೇಹಿತನ ಕೊಲೆ ಪ್ರಕರಣ: ಆರೋಪಿ ಸೆರೆ
ಬೆಂಗಳೂರು, ಮಾ.25: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನಿಗೆ ಕಲ್ಲಿನಲ್ಲಿ ಹೊಡೆದು ಹತ್ಯೆಗೈದ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಇಲ್ಲಿನ ಗೋವಿಂದರಾಜನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಾರಿಮುತ್ತು ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಮದ್ಯದಂಗಡಿಯಲ್ಲಿ ಮದ್ಯ ಸೇವನೆಗೆ ಬಂದಿದ್ದ ನರೇಶ್ ಹಾಗೂ ಮಾರಿಮುತ್ತು ನಡುವೆ ಗಲಾಟೆಯಾಗಿತ್ತು. ನೋಡ-ನೋಡುತ್ತಿದ್ದಂತೆ ಗಲಾಟೆ ಹೆಚ್ಚಾಗಿ ಕಲ್ಲನ್ನು ನರೇಶ್ ತಲೆಗೆ ಹೊಡೆದು ಮಾರಿಮುತ್ತು ಪರಾರಿಯಾಗಿದ್ದರು. ಪೆಟ್ಟು ಹೆಚ್ಚಾಗಿದ್ದರಿಂದ ರಕ್ತಸ್ರಾವ ಉಂಟಾಗಿ ಕುಸಿದುಬಿದ್ದು ನರೇಶ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story