ರೈತ ವಿರೋಧಿ ಕಾನೂನಿನಿಂದ ತುಂಡು ಭೂಮಿಗಾಗಿ ಪರದಾಟ: ಉದ್ಯಾವರ ಹಾಲು ಉತ್ಪಾದಕರ ಸಹಕಾರಿ ಸಂಘ ಆರೋಪ

ಉಡುಪಿ, ಮಾ.25: ಕಳೆದ 17ವರ್ಷಗಳಿಂದ ಉದ್ಯಾವರ ರೈತರಿಗೆ ಹಾಲಿನ ಸಂಗ್ರಹ ಮತ್ತು ಕೆಎಂಎಫ್ಗೆ ಸರಬರಾಜು ಕೇಂದ್ರವಾಗಿ ಕಾರ್ಯಾಚರಿಸುತ್ತಿ ರುವ ಉದ್ಯಾವರ ಹಾಲು ಉತ್ಪಾದಕರ ಸಹಕಾರಿ ಸಂಘವು ಸರಕಾರದ ರೈತ ವಿರೋಧಿ ಕಾನೂನಿನಿಂದಾಗಿ ತುಂಡು ಸರಕಾರಿ ಜಾಗಕ್ಕಾಗಿ ಪರದಾಡು ವಂತಾಗಿದೆ ಎಂದು ಸಂಘದ ಅಧ್ಯಕ್ಷ ವಿಜಯ ಕುಮಾರ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಆಧುನಿಕ ಪರಿಕರಗಳನ್ನು ಹೊಂದಿದ್ದರೂ ಸೂಕ್ತ ಕೊಠಡಿ, ಸ್ವಂತ ಕಟ್ಟಡ ಇಲ್ಲದೆ ತೊಂದರೆ ಅನುಭವಿಸುತ್ತಿದೆ. ಈವರೆಗೆ ಬಾಡಿಗೆ ಮನೆಯಿಂದ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದ ಸಂಘವು ಇದೀಗ ಗ್ರಾಪಂ ನೀಡಿದ ತುಂಡು ಜಾಗದಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಿ ಕೆಲಸ ಕಾರ್ಯವನ್ನು ಮುಂದು ವರೆಸುತ್ತಿದೆ ಎಂದರು.
ಕಳೆದ 17ವರ್ಷಗಳಿಂದ 2-3ಸೆಂಟ್ಸ್ ಸರಕಾರಿ ಜಾಗವನ್ನು ಸರಕಾರಿ ದರ ನೀಡಿ ಖರೀದಿಸಲು ಪ್ರಯತ್ನಿಸಿದರೂ ಈವರೆಗೆ ಸಾಧ್ಯವಾಗಿಲ್ಲ. ನಮ್ಮ ಮನವಿ ಒಳಗೊಂಡ ಕಡತ ಸಹಾಯಕ ಕಮಿಷನರ್ ಕುಂದಾಪುರ ಇಲ್ಲಿಂದ ತಿರಸ್ಕರಿಸ ಲ್ಪಡುತ್ತಿದೆ. ಇದಕ್ಕೆ ಕಾರಣ ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ವಯ ಖಾಸಗಿ ಸಂಸ್ಥೆಗಳಿಗೆ ಸರಕಾರಿ ಜಮೀನು ಮಂಜೂರು ಮಾಡಲು ಅವಕಾಶ ಇಲ್ಲದೆ ಇರುವುದು. ಇದೊಂದು ರೈತ ವಿರೋಧಿ ಕಾನೂನು ಆಗಿದೆ. ಇದನ್ನು ಯಾವುದೇ ಸರಕಾರ ಕೂಡ ತಿದ್ದುಪಡಿ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ. ಇದರಿಂದ ಸರಕಾರಗಳು ರೈತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ತಿಳಿಯುತ್ತದೆ ಎಂದು ಅವರು ದೂರಿದರು.
ಉದ್ಯಾವರದಲ್ಲಿರುವ ಗೋಮಾಳ ಭೂಮಿಯನ್ನು ವಿವಿಧ ಸಂಸ್ಥೆಗಳಿಗೆ, ಘಟಕಗಳಿಗೆ ವಿತರಿಸಲಾಗಿದೆ. ಆದರೆ ಗೋವುಗಳನ್ನು ನಂಬಿ ಜೀವನ ಸಾಗಿಸುವ ಉದ್ಯಾವರ ಹಾಲು ಉತ್ಪಾದಕರ ಸಂಘದ ಸ್ವಂತ ಕಟ್ಟಡಕ್ಕೆ ಒಂಚೂರು ಜಮೀನು ನೀಡಲು ಅವಕಾಶ ಇಲ್ಲದೆ ಇರುವುದು ದುರಂತ. ಆದುದರಿಂದ 250ಕ್ಕಿಂತ ಅಧಿಕ ಸದಸ್ಯರನ್ನು ಹೊಂದಿರುವ ಈ ಸಂಘಕ್ಕೆ ಕೂಡಲೇ ಸರಕಾರಿ ಜಮೀನು ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದೇಜು ಪೂಜಾರಿ, ನಿರ್ದೇಶಕರಾದ ಭಾಸ್ಕರ್ ಅಂಚನ್, ವಿಠಲ ಜತ್ತನ್ನ, ವಿಜಯ ಕುಮಾರ್ ಕಲಾಯಿ, ಸುಕುಮಾರ್ ಉಪಸ್ಥಿತರಿದ್ದರು.