ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭ
ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಾಜ್ಯ ದಲ್ಲೇ ಪ್ರಥಮ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ಅತ್ಯಂತ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಜಿಲ್ಲೆಯ ತಾಲೂಕು ಪ್ರದೇಶಗಳಾದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಆಸ್ಪತ್ರೆಗಳಲ್ಲೂ ಪ್ರಕೃತಿ ಚಿಕಿತ್ಸೆ ಆರಂಭಿಸಲು ಜಿಲ್ಲಾಡಳಿತದಿಂದ ನೆರವು ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದರು.
ನಗರದ ವೆನ್ಲಾಕ್ ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 20 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ನ್ಯಾಚುರೋಪತಿ ಉಪಕರಣಗಳ ಹಸ್ತಾಂತರ ಮತ್ತು ನೂತನ ಪ್ರಕೃತಿ ಚಿಕಿತ್ಸಾ ವಿಭಾಗಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕೃತಿ ಚಿಕಿತ್ಸೆಗೆ ಅನುಕೂಲವಾಗಬೇಕಾದ ಭೂಮಿ ಮತ್ತು ಮೂಲಸೌಲಭ್ಯಕ್ಕೆ ಜಿಲ್ಲಾಡಳಿತ ಸಹಕಾರ ನೀಡಲಿದೆ. ಇತ್ತೀಚೆಗೆ ಆಯುರ್ವೇದ, ನ್ಯಾಚುರೋಪತಿ, ಯುನಾನಿ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ. ಸರಕಾರಿ ಆಯುಷ್ ಆಸ್ಪತ್ರೆಯೊಂದರಲ್ಲಿ ಸುಸಜ್ಜಿತವಾದ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ನಗರದ ಬಡ ರೋಗಿಗಳಿಗೆ ವರವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೂ ಈ ಸೌಲಭ್ಯ ದೊರೆಯಬೇಕು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕಟ್ಟಡ, ಮೂಲಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು.
ಆಯುಷ್ ಆಸ್ಪತ್ರೆಗೆ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿ. (ಎಂಸಿಎಫ್) ಸುಮಾರು ೨೦ ಲಕ್ಷ ರೂ.ಮೌಲ್ಯದ ಅತ್ಯಾಧುನಿಕ ಪ್ರಕೃತಿ ಚಿಕಿತ್ಸೆ ಸಂಬಂಧಿತ ಉಪಕರಣಗಳನ್ನು ಒದಗಿಸಿದೆ. ಈ ಮೂಲಕ ಎಂಸಿಎಫ್ ಸಿಎಸ್ಆರ್ ನಿಧಿ ಉತ್ತಮ ಕಾರ್ಯಕ್ಕೆ ವಿನಿಯೋಗವಾಗಿದೆ ಎಂದರು.
ವೇದಿಕೆಯಲ್ಲಿ ಎಂಸಿಎಫ್ ಚೀಫ್ ಪ್ರೊಡಕ್ಷನ್ ಆಫೀಸರ್ ಗಿರೀಶ್ ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಸದಾಶಿವ ಶ್ಯಾನುಭೋಗ್ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಸರಕಾರಿ ಮಟ್ಟದಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಸುಸಜ್ಜಿತ ಪ್ರಕೃತಿ ಚಿಕಿತ್ಸಾ ವಿಭಾಗವೊಂದು ಸಾರ್ವಜನಿಕರ ಸೇವೆಗೆ ತೆರೆದುಕೊಂಡಿದೆ. ಈ ಕೇಂದ್ರದಲ್ಲಿ ಎಲ್ಲಾ ವಿಧದ ಜಲಚಿಕಿತ್ಸೆ, ಸೋನಾಬಾತ್, ಅಕ್ಯುಪಂಕ್ಚರ್, ಅಕ್ಯುಪ್ರೆಶರ್, ಅಯಾನ್ ಡೆಟಾಕ್ಸ್ ಥೆರಪಿ, ಮ್ಯಾಗ್ನೆಟಿಕ್ ಥೆರಪಿ, ಮ್ಯೂಸಿಕ್ ಥೆರಪಿ, ಮಡ್ಬಾತ್ ಸಹಿತ ಎಲ್ಲ ಪ್ರಮುಖ ಹಾಗೂ ಅಪರೂಪದ ಚಿಕಿತ್ಸೆಗಳು ಲಭ್ಯವಿದೆ. ಬಿಪಿಎಲ್ ಕಾರ್ಡ್ದಾರರಿಗೆ ಸದ್ಯ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸರಕಾರಿ ಮಾರ್ಗಸೂಚಿಯಂತೆ ಎಪಿಎಲ್ ಕಾರ್ಡ್ ದಾರರಿಗೂ ಕನಿಷ್ಠ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದರು.