ಬಾಲಗೌರವ ಪ್ರಶಸ್ತಿಗೆ ಶ್ರಾವ್ಯಾ ಆಯ್ಕೆ
ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡಮಿ ಧಾರವಾಡ ಇವರು ಕೊಡಮಾಡುವ ಪ್ರತಿಷ್ಠಿತ ಬಾಲಗೌರವ ಪ್ರಶಸ್ತಿಗೆ ಮಂಗಳೂರಿನ ಸೌರಭ ಕಲಾ ಪರಿಷತ್ ಸಂಸ್ಥೆಯ ಗುರು ಡಾ.ಶ್ರೀವಿದ್ಯಾ ಮುರಳೀಧರ್‌ರ ಶಿಷ್ಯೆ ಶ್ರಾವ್ಯಾ ಬಿ.ಎಸ್. ಭಾಜನರಾಗಿದ್ದಾರೆ.
ಸಂಗೀತ, ನೃತ್ಯ, ಕ್ರೀಡೆ, ಚಿತ್ರಕಲೆ, ಬಹುಮುಖ ಪ್ರತಿಭೆ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ರಾಜ್ಯದಿಂದ ಆಯ್ದ ಪ್ರತಿಭಾನ್ವಿತ ಮಕ್ಕಳಿಗೆ ಸರಕಾರವು ವರ್ಷಂಪ್ರತಿ ಬಾಲಗೌರವ ಪುರಸ್ಕಾರವನ್ನು ನೀಡುತ್ತಾ ಬಂದಿದೆ. ಈ ಬಾರಿಯ ಪ್ರಶಸ್ತಿಗಳಲ್ಲಿ ನೃತ್ಯ ಕ್ಷೇತ್ರದಲ್ಲಿ ಮಾತ್ರವೇ ದ.ಕ.ಜಿಲ್ಲೆಗೆ ಪ್ರಶಸ್ತಿ ಲಭಿಸಿದೆ.
ಕೃಷ್ಣ ಮಯ್ಯ ಮತ್ತು ಬಬಿತಾ ಕೃಷ್ಣ ಮಯ್ಯ ದಂಪತಿಯ ಪುತ್ರಿಯಾಗಿರುವ ಶ್ರಾವ್ಯ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ. ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಗಳನ್ನು ಗಳಿಸಿದ್ದಾರೆ. ಮಾ.27ರಂದು ಧಾರವಾಡದ ಬಾಲವಿಕಾಸ ಅಕಾಡಮಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.